ರಾಯಚೂರು ಗೃಹರಕ್ಷಕ ದಳದಲ್ಲಿ 54 ಸ್ವಯಂಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಯಚೂರು: ರಾಯಚೂರು ಜಿಲ್ಲೆಯ ಗೃಹರಕ್ಷಕ ದಳದ ತಾಲೂಕು ಹಾಗೂ ಉಪ ಘಟಕಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಒಟ್ಟು 54 ಸ್ವಯಂಸೇವಕ ಗೃಹರಕ್ಷಕ ಸದಸ್ಯರ (ಪುರುಷ ಮತ್ತು ಮಹಿಳೆ) ಹುದ್ದೆಗಳಿಗೆ ಅರ್ಹ ಹಾಗೂ ಸ್ವಯಂಸೇವಾ ಮನೋಭಾವ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು: ಅಭ್ಯರ್ಥಿಗಳು ರಾಯಚೂರು ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟವರಾಗಿರಬೇಕು ಹಾಗೂ ಅರ್ಜಿ ಸಲ್ಲಿಸುವ ಘಟಕದ ವ್ಯಾಪ್ತಿಗೆ ಸಮೀಪದಲ್ಲಿ ವಾಸಿಸುತ್ತಿರಬೇಕು. ಕನಿಷ್ಠ 19ರಿಂದ ಗರಿಷ್ಠ 50 ವರ್ಷ ವಯೋಮಿತಿಯೊಳಗಿರಬೇಕು. ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ದೈಹಿಕವಾಗಿ ಸದೃಢರಾಗಿದ್ದು, ಆರೋಗ್ಯವಂತರಾಗಿರಬೇಕು ಹಾಗೂ ಗೃಹರಕ್ಷಕ ನಿಯಮಗಳ ವ್ಯಾಪ್ತಿಗೆ ಒಳಪಟ್ಟಿರಬೇಕು.
ಅರ್ಜಿ ವಿತರಣೆ ಮತ್ತು ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ತೋರಿಸಿ, ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ನವೆಂಬರ್ 6ರಿಂದ 13ರವರೆಗೆ ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಅರ್ಜಿ ಪಡೆದುಕೊಳ್ಳಬಹುದು. ಸರ್ಕಾರಿ ರಜಾ ದಿನಗಳಲ್ಲಿ ಅರ್ಜಿ ವಿತರಣೆ ಇರುವುದಿಲ್ಲ.
ಭರ್ತಿ ಮಾಡಿದ ಅರ್ಜಿಗಳನ್ನು ಜನ್ಮ ದಿನಾಂಕದ ದೃಢೀಕರಣ ಪತ್ರ, ವಿದ್ಯಾರ್ಹತೆಯ ದಾಖಲೆ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ನವೆಂಬರ್ 16ರಿಂದ 30ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಆಯ್ಕೆ ಖಚಿತವಾಗುವುದಿಲ್ಲ. ಆಯ್ಕೆ ಸಮಿತಿಯ ಪರೀಕ್ಷೆ ಹಾಗೂ ತೀರ್ಮಾನವೇ ಅಂತಿಮವಾಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಒಂದು ವಾರದೊಳಗೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು. ಗೃಹರಕ್ಷಕ ಸದಸ್ಯತ್ವವು ಸಂಪೂರ್ಣವಾಗಿ ಸ್ವಯಂಸೇವಾ ಹುದ್ದೆಯಾಗಿದ್ದು, ಇದು ಖಾಯಂ ಹುದ್ದೆಯಾಗಿರುವುದಿಲ್ಲ. ಸರ್ಕಾರದ ಆದೇಶದಂತೆ ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಮಾತ್ರ ಭತ್ಯೆ ಪಾವತಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕ ದಳದ ಕಾರ್ಯಾಲಯ, ಪ್ರಥಮ ದರ್ಜೆ ಕಾಲೇಜು ಹತ್ತಿರ, ನಿಜಲಿಂಗಪ್ಪ ಕಾಲೋನಿ, ರಾಯಚೂರು–584101 ಅಥವಾ ದೂರವಾಣಿ ಸಂಖ್ಯೆ 08532-221679 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






