ಅರಕೇರಾ | ಸುವರ್ಣ ಗ್ರಾಮ ಜಾಗದ ಹಕ್ಕು ಪತ್ರ ನೀಡಲು ಒತ್ತಾಯಿಸಿ ಪಂಚಾಯತ್‌ಗೆ ಬೀಗ ಹಾಕಿ ಪ್ರತಿಭಟನೆ

ಅರಕೇರಾ: ತಾಲೂಕಿನ ಕ್ಯಾದಿಗೇರಾ ಗ್ರಾಮ ಪಂಚಾಯತ್‌ನಲ್ಲಿ ಸುಮಾರು 18 ವರ್ಷಗಳಿಂದ ನೆನೆಗುದಿಗೆ ಬಿದ್ದ ಸುವರ್ಣ ಗ್ರಾಮ ಜಾಗದ ಹಕ್ಕು ಪತ್ರ ನೀಡಲು ಗ್ರಾಮದ ಫಲಾನುಭವಿಗಳು ಮತ್ತು ಡಿಎಸ್‌ಎಸ್ ಸಂಘಟನೆ ಪಂಚಾಯತಿಗೆ ಬೀಗ ಹಾಕಿ, ಪ್ರತಿಭಟನೆ ಮಾಡಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, 2007-08ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಬಡವರೇ ಹೆಚ್ಚಾಗಿರುವ ಕ್ಯಾದಿಗೇರಾ ಗ್ರಾಮವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಿ ಯೋಜನೆಗೆ ಬೇಕಾಗುವ 9 ಎಕರೆ ಜಾಗವನ್ನು ಜು.24ರ 2007ರಲ್ಲಿ ಖಾಸಗಿಯವರಿಂದ ಸರಕಾರ ಖರೀದಿಸಿತು. ಸದ್ಯ ಆ ಜಾಗ ಈಗ ರಾಜ್ಯಪಾಲರ ಹೆಸರಿನಲ್ಲಿದ್ದು ಖಾಲಿ ಬಿದ್ದಿದೆ. 2017 ರಲ್ಲಿ ಅಂದರೆ 9 ವರ್ಷಗಳ ನಂತರ ಜಂಟಿ ನಿರ್ದೇಶಕರು ಕಲಬುರಗಿ( ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ) ಅವರು ಜಾಗದ ನಕ್ಷೆಯನ್ನು ಕೂಡ ಸಿದ್ದಪಡಿಸಿದರು.
ಇದಲ್ಲದೆ ಗ್ರಾಮ ಪಂಚಾಯತ್ ಅಧಿಕಾರಿಗಳಿಂದ ಸುವರ್ಣ ಗ್ರಾಮ ಜಾಗದ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಬಿಪಿಎಲ್ ಕಾರ್ಡ್ ಸಂಖ್ಯೆಗಳನ್ನು ಸಂಗ್ರಹಿಸಿ, 252 ಫಲಾನುಭವಿಗಳಿಗೆ ಜಾಗಗಳನ್ನು ಹಂಚಬಹುದಾಗಿತ್ತು. ಆದರೆ ಗ್ರಾಮ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿಯಿಂದ, ಸುವರ್ಣ ಗ್ರಾಮ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದರು.
ಈ ವೇಳೆ ಸ್ಥಳಕ್ಕೆ ಬಂದ ಅರಕೇರಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು 9 ಎಕರೆ ಜಮಿನಿನಲ್ಲಿ ಈಗಾಗಲೇ ಅನುಮೋದನೆಗೊಂಡ ಲೇಔಟ್ ನಂತೆ ಪ್ಲಾಟ್ ಗಳಿಗೆ ಬಾಂಡ್‌ಗಳನ್ನು ಹಾಕಿ ನಂತರ ಗ್ರಾಮ ಸಭೆಯ ಮುಖಾಂತರ ಫಲಾನುಭವಿಗಳು ಆಯ್ಕೆ ಮಾಡಲು 20 ದಿನಗಳ ಕಾಲಾವಕಾಶ ನೀಡಿ ಎಂದರು.
ನಂತರ ಗ್ರಾಮದ ಫಲಾನುಭವಿಗಳಿಗೆ ಮುಷ್ಕರ ನಿಲ್ಲಿಸುವಂತೆ ಲಿಖಿತ ರೂಪದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು ಮನವಿ ನೀಡಿದರು.
ಈ ವೇಳೆ ಅರಕೇರಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅಣ್ಣಾರಾವ್, ಪಂಚಾಯತ್ ಅಧಿಕಾರಿ ನಿಂಗಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೀಲಮ್ಮ ರಾಜಶೇಖರ, ಗ್ರಾಮ ಪಂಚಾಯತಿ ಸದಸ್ಯರು, ಹನುಮಯ್ಯ ಮಾಸ್ತಾರ, ಹೈದರ್ ಅಲಿ ಪಣಕನಮರಡಿ, ಕಲಾತಂಡದ ಮುಖಂಡರು ನಾಗರಾಜ ದೇವರಮನಿ ಅರಕೆರಾ, ತಾಲೂಕು ಅಧ್ಯಕ್ಷರು ರವಿ ಜಡಲದಿನ್ನಿ, ಆಂಜನೇಯ ಬೇರಿ, ಶಿವಪ್ಪ, ಶಿವರಾಜ ಭೂಮನಗುಂಡ ಸೇರಿದಂತೆ ಊರಿನ ಹಿರಿಯರು ಮುಖಂಡರು ಮುಷ್ಕರದಲ್ಲಿ ಪಾಲ್ಗೊಂಡರು.







