ಮಟ್ಟೂರು ತಾಂಡದಲ್ಲಿ ಪೊಲೀಸರ ಮೇಲೆ ಹಲ್ಲೆ ಪ್ರಕರಣ | ಪ್ರತಿದೂರಿಗೆ ಸ್ಪಂದನೆ ಇಲ್ಲ: ಆರೋಪ

ರಾಯಚೂರು: ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿ ಮಟ್ಟೂರು ತಾಂಡದಲ್ಲಿ ರಾಮಪ್ಪ ಮತ್ತು ಸಕ್ಕುಬಾಯಿ ಇವರ ಮೇಲೆ ನಡೆದ ಹಲ್ಲೆ ಘಟನೆ ಸಂಬಂಧಿಸಿದಂತೆ ಪ್ರತಿದೂರು ದಾಖಲಾದರೂ ಆರೋಪಿಗಳನ್ನು ಬಂಧಿಸದೇ ಪಿಎಸ್‍ಐ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಈಶ್ವರ ಜಾಧವ ಆರೋಪಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಪ್ರಕರಣದಲ್ಲಿ ಹಳೆ ದ್ವೇಷಕ್ಕೆ ಸಂಬಂದಿಸಿದಂತೆ ರೈಲ್ವೆ ಪೊಲೀಸ್ ಪೇದೆ ರಾಘವೇಂದ್ರ ಇವರು ಪೊಲೀಸ್‍ರೊಂದಿಗೆ ಹೊಂದಿರುವ ಸ್ನೇಹದಿಂದ ಸುಳ್ಳು ಆರೋಪಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ದೂರು ದಾಖಲಿಸಲಾಗಿತ್ತು. ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯಿಂದ ಪ್ರತಿ ದೂರು ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹಾಗೂ ಡಿವೈಎಸ್ಪಿ ಇವರಿಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.
ಪೊಲೀಸ್ ಇಲಾಖೆಯಿಂದ ನ್ಯಾಯಸಮತ ನಡೆಯನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಮುದುಗಲ್ ಪಿಎಸ್‍ಐ ತನ್ನ ಸ್ನೇಹಿತ ರಾಘವೇಂದ್ರ ಇವರನ್ನು ರಕ್ಷಿಸಲು ಆರೋಪಿಗಳನ್ನು ಬಂಧಿಸದೇ ಸಹಕರಿಸುತ್ತಿದ್ದಾರೆ. ಈಗಾಗಲೇ ರಾಮಪ್ಪ ಮತ್ತು ಸಕ್ಕುಬಾಯಿ ಇವರನ್ನು ಬಂಧಿಸಿರುವ ಪೊಲೀಸರು ಇನ್ನೊಂದು ಗುಂಪಿನವರನ್ನು ಬಂಧಿಸದೇ ತಾರತಮ್ಯ ಮಾಡುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸದೇ ಹೋದಲ್ಲಿ ನ್ಯಾಯಾಂಗಮೊರೆ ಹೋಗುವುದಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಲಾಲಮ್ಮ, ಶಿಲ್ಪಾ ಇದ್ದರು.





