ಮುಸ್ಲಿಮರ ಮೇಲೆ ದಾಳಿ ಆರಂಭ, ಮುಂದೆ ದಲಿತರ, ಕ್ರೈಸ್ತರ ಸರದಿ: ಶಿವಸುಂದರ್ ಕಳವಳ
ರಾಯಚೂರಿನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಜಾಗೃತಿ ಸಮಾವೇಶ

ಶಿವಸುಂದರ್
ರಾಯಚೂರು : ವಕ್ಫ್ ತಿದ್ದುಪಡಿ ಕಾಯ್ದೆ ಮುಸ್ಲಿಮರ ಧಾರ್ಮಿಕ ಹಕ್ಕು ಹಾಗೂ ಆಸ್ತಿಪಾಸ್ತಿ ಕಸಿದುಕೊಳ್ಳುವ ಹುನ್ನಾರವಾಗಿದೆ. ಇದು ಮುಸ್ಲಿಮರ ಮೇಲಿನ ದಾಳಿಯ ಆರಂಭವಾಗಿದೆ. ಮುಂದೆ ಕ್ರಿಶ್ಚಿಯನ್, ದಲಿತರ, ಅಲ್ಪಸಂಖ್ಯಾತರ ಮೇಲೆಯೂ ದಾಳಿ ಮುಂದುವರಿಯಲಿದೆ ಎಂದು ಚಿಂತಕ ಶಿವಸುಂದರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಯ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಆಯೋಜಿಸಿದ್ದ ವಕ್ಫ್ ತಿದ್ದುಪಡಿ ಕಾಯ್ದೆಯ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಕ್ಫ್ ಕಾಯ್ದೆ ಅಡಿಯಲ್ಲಿ ಎಲ್ಲರಿಗೂ ವಕ್ಫ್ ಗೆ ದಾನ ಮಾಡುವ ಹಕ್ಕು ನೀಡಲಾಗಿತ್ತು. ನೂತನ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರೇತರರು ವಕ್ಫ್ಗೆ ಜಮೀನು ನೀಡಲು ಬರುವುದಿಲ್ಲ, ವಕ್ಫ್ಗೆ ದಾನ ಮಾಡಬೇಕಾದರೆ, ಯಾರಾದರೂ ಮುಸ್ಲಿಂ ಧರ್ಮದಲ್ಲಿ 5 ವರ್ಷ ಇಸ್ಲಾಂ ಧರ್ಮ ಅನುಸರಿಸಬೇಕು ಎಂಬೆಲ್ಲ ಕಟ್ಟುನಿಟ್ಟಿನ ನಿಯಮ ರೂಪಿಸಿ ದಾನ ಮಾಡದಂತೆ ಕಾಯ್ದೆ ರೂಪಿಸಲಾಗಿದೆ ಎಂದು ಆರೋಪಿಸಿದರು.
ನೂತನ ವಕ್ಫ್ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಐಎಎಸ್ ಅಧಿಕಾರಿಗೆ ಸರ್ವಾಧಿಕಾರ ನೀಡಲಾಗಿದ್ದು, ಸರಕಾರದ ಪರವಾಗಿ ವಕಾಲತ್ತು ನಡೆಸಲಾಗುತ್ತದೆ. ಇದರಿಂದ ಮುಸ್ಲಿಮರಿಗೆ ನ್ಯಾಯ ಸಿಗುವುದು ಅಸಾಧ್ಯ ಎಂದರು.
ದೇಶದಲ್ಲಿನ ವಕ್ಫ್ ಆಸ್ತಿಯ ಮೇಲೆ ಕೇಂದ್ರ ಸರಕಾರ ಕಣ್ಣು ಹಾಕಿದ್ದು, ಅದನ್ನು ಕಬಳಿಸಲು ವಕ್ಫ್ ಕಾಯ್ದೆಯನ್ನು ತಿದ್ದುಪಡಿ ತರಲು ಹೊರಟಿದೆ. ಸಂಸತ್ತಿನಲ್ಲಿ ಜಾರಿಗೆ ತಂದ ಕಾಯ್ದೆಯನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿ ದಾವೆ ಹೂಡಲಾಗಿದೆ. ಸಂಸತ್ತು ಸರ್ವಶ್ರೇಷ್ಠವಲ್ಲ, ಸುಪ್ರೀಂಕೋರ್ಟ್ ಕೂಡ ಸರ್ವಶ್ರೇಷ್ಠವಲ್ಲ, ಸಂವಿಧಾನವೇ ಸರ್ವಶ್ರೇಷ್ಠ ಎಂದು ಹೇಳಿದರು.
ವಕ್ಫ್ ತಿದ್ದುಪಡಿ ಮುಸ್ಲಿಮರ ಮೇಲೆ ದಾಳಿಯ ಆರಂಭವಾಗಿದೆ. ಮುಂದೆ ಕ್ರಿಶ್ಚಿಯನ್, ದಲಿತರ, ಆದಿವಾಸಿಗಳ, ಮಹಿಳೆಯರ ಮೇಲೆ ದಾಳಿ ಮಾಡಲಾಗುತ್ತದೆ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಬೇಕಾಗಿದೆ ಎಂದು ಸಲಹೆ ನೀಡಿದರು.
ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಖಾಲಿದ್ ಸೈಫುಲ್ಲಾ ರಹಿಮಾನಿ ಮಾತನಾಡಿ, ದೇಶದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಕಾಯ್ದೆಗಳನ್ನು ಜಾರಿ ಮಾಡಲಾಗುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಮೂಲಕ ಮುಸ್ಲಿಮರ ಧಾರ್ಮಿಕ ಹಕ್ಕು ಉಲ್ಲಂಘನೆ ಮಾಡಲಾಗುತ್ತಿದೆ. ಮದರಸ, ಮಸೀದಿಗಳನ್ನು ತೆರವು ಮಾಡಲಾಗುತ್ತಿದೆ. ನಾವೆಲ್ಲರೂ ನಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿ ದೇಶದಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಹೈದರಾಬಾದ್ನ ಮುಹಮ್ಮದ್ ಖಾನ್ ಹಮೀದ್, ಮೌಲಾನಾ ಜಾಫರ್ ಪಾಷಾ ಸಾಹೇಬ್, ಜಮಾಅತೆ ಇಸ್ಲಾಮೀ ಹಿಂದ್ನ ಮುಖಂಡರು, ಧಾರ್ಮಿಕ ಗುರುಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.