ವಕ್ಫ್ ತಿದ್ದುಪಡಿ ಕಾಯ್ದೆಯಿಂದ ನಮ್ಮ ಮಸೀದಿ, ಮದರಸವನ್ನು ವಶಕ್ಕೆ ಪಡೆಯುವ ಹುನ್ನಾರ ಯಶಸ್ವಿಯಾಗಲ್ಲ : ಅಸದುದ್ದೀನ್ ಉವೈಸಿ

ರಾಯಚೂರು : ಇಸ್ರೇಲ್ ಗಾಝಾದ ಸಾವಿರಾರು ಮಕ್ಕಳು, ಮಹಿಳೆಯರ, ನಾಗರಿಕರ ಮಾರಣ ಹೋಮ ನಡೆಸಿದೆ. ನಾವೆಲ್ಲರೂ ಫೆಲೆಸ್ತೀನ್ ಪರ ನಿಲ್ಲಬೇಕು. ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ರಕ್ತದ ದಾಹ ಇನ್ನೂ ನೀಗಿಲ್ಲ ಎಂದು ಅಸದುದ್ದೀನ್ ಉವೈಸಿ ಹೇಳಿದರು.
ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಯ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಆಯೋಜಿಸಿದ್ದ ವಕ್ಫ್ ತಿದ್ದುಪಡಿ ಕಾಯ್ದೆಯ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಸ್ಲಿಂ ಧರ್ಮಕ್ಕಾಗಿ ಮಡಿದ ಹುತಾತ್ಮರನ್ನು ನಾವೆಲ್ಲರೂ ನೆನೆಯಬೇಕು. ವಕ್ಫ್ ತಿದ್ದುಪಡಿ ಕಾಯ್ದೆಯಿಂದ ನಮ್ಮ ಮಸೀದಿ, ಮದರಸ, ಖಬರ್ ಸ್ಥಾನವನ್ನು ವಶಕ್ಕೆ ಪಡೆಯುವ ಹುನ್ನಾರ ಯಶಸ್ವಿಯಾಗಲ್ಲ, ಅವರು ಮುಸ್ಲಿಮರನ್ನು ಅಂಜಿಸುವ ಕಾರ್ಯ ಈ ತಿದ್ದುಪಡಿಯಿಂದ ಮಾಡಲು ಆಗಲ್ಲ ಎಂದರು.
ವಕ್ಫ್ ಗೆ ಭೂಮಿ ದಾನ ಮಾಡಲು 5 ವರ್ಷ ಇಸ್ಲಾಂ ಧರ್ಮ ಅನುಸರಿಸಬೇಕೆಂದು ಅವೈಜ್ಞಾನಿಕ ನಿಯಮ ರೂಪಿಸಿದ್ದು, ಬೇರೆ ಯಾವುದೇ ಧರ್ಮದಲ್ಲಿ ಇಂತಹ ನಿಯಮಗಳಿಲ್ಲ. ರಾಯಚೂರಿನ ಏಕ್ ಮಿನಾರ್ ಮಸೀದಿಗೆ 500 ವರ್ಷಗಳ ಇತಿಹಾಸವಿದೆ. ಇದಕ್ಕೆ ಕ್ರಿಶ್ಚಿಯನ್ ಧರ್ಮದವರು ದೇಣಿಗೆ ನೀಡಿದ್ದಾರೆ ಇದು ಭ್ರಾತೃತ್ವದ ಸಂಕೇತ ಎಂದರು.
ಮುಸ್ಲಿಂ ಮಹಿಳೆಯರಿಗೆ ನ್ಯಾಯ ನೀಡಲು ತ್ರಿವಲ್ ತಲಾಖ್ ಮಾಡಿದ್ದೇವೆ ಎನ್ನುವ ನೀವು ಬಿಲ್ಕಿಸ್ ಬಾನು ಅವರನ್ನು ಕರೆದು ಜೊತೆಯಲ್ಲಿ ಟೀ ಕುಡಿಯಬಹುದೇ ಎಂದು ವಾಗ್ದಾಳಿ ನಡೆಸಿದರು. ಬಜರಂಗದಳ, ಆರೆಸೆಸ್ಸ್ ಕಾರ್ಯಕರ್ತರು, ಬೆಜೆಪಿಯ ಬೆಂಬಲಿಗರು ದಲಿತರ, ಮುಸ್ಲಿಮರ ಮೇಲೆ ಹಲ್ಲೆ, ಅಮಾಯಕರ ಕೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸುವವರು ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ತೋರಿಸಿ ಎಂದಾಗ ಕಾರ್ಯಕ್ರಮದಲ್ಲಿ ಇದ್ದ ನೂರಾರು ಯುವಕರು ಎದ್ದು ನಿಂತು ಟಾರ್ಚ್ ತೋರಿಸಿ ಅಸದುದ್ದೀನ್ ಪರ ಘೋಷಣೆ ಕೂಗಿದರು.