ರಾಯಚೂರು ನಗರಸಭೆ ಆಡಳಿತ ಅವಧಿ ಪೂರ್ಣಗೊಳ್ಳುವ ಹಿನ್ನೆಲೆ : ಕಲಬುರಗಿ ಹೈಕೋರ್ಟ್ ಮಧ್ಯಂತರ ಆದೇಶ

ರಾಯಚೂರು : ರಾಯಚೂರು ನಗರಸಭೆಯ ಚುನಾಯಿತ ಸಮಿತಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ 30 ತಿಂಗಳು ಆಡಳಿತ ನಡೆಸಲು ಅವಕಾಶ ನೀಡಬೇಕು ಎಂಬ ಬೇಡಿಕೆಗೆ ಕಲಬುರಗಿ ಹೈಕೋರ್ಟ್ ಪುರಸ್ಕರಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ 30 ತಿಂಗಳು ಎಂದು ನಿಗದಿಪಡಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡದ ಕಾರಣ ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. ಈ ಅವಧಿಯನ್ನು ಚುನಾಯಿತ ಮಂಡಳಿಯ ಆಡಳಿತ ಅವಧಿಯಾಗಿ ಪರಿಗಣಿಸಬಾರದು ಎಂದು, ನಗರಸಭೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಜೆ. ಸಾಜೀದ್ ಸಮೀರ್ ಹಾಗೂ ಕೌನ್ಸಿಲ್ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಮಧ್ಯಂತರ ತಡೆಯಾಜ್ಞೆ ನೀಡಿ, ಪೌರಾಡಳಿತ ಇಲಾಖೆ ಮತ್ತು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದಾರೆ. ಅರ್ಜಿದಾರರ ಪರವಾಗಿ ವಕೀಲ ರವಿ ಬಿ. ಪಾಟೀಲ್ ವಾದ ಮಂಡಿಸಿದರು.
ನಗರಸಭೆಯ ಚುನಾಯಿತ ಮಂಡಳಿಗೆ ಇದುವರೆಗೆ ಕೇವಲ 15 ತಿಂಗಳು ಮಾತ್ರ ಆಡಳಿತ ನಡೆಸಲು ಅವಕಾಶ ದೊರಕಿದ್ದು, ಉಳಿದ 16 ತಿಂಗಳು ಆಡಳಿತಾಧಿಕಾರಿಯ ಕೈಯಲ್ಲಿ ಇತ್ತು. ಸರ್ಕಾರ ನಿಗದಿಪಡಿಸಿದ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದ್ದರು.
ಇತ್ತ ಸರ್ಕಾರ ಈಗಾಗಲೇ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿದ್ದು, ಮೀಸಲಾತಿ ನಿಗಧಿಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯಿಂದ ಅಂತಿಮ ಆದೇಶ ಬರುವವರೆಗೆ ಪ್ರಸ್ತುತ ಮಂಡಳಿಯ ಅಧಿಕಾರ ಮುಂದುವರಿಯಲಿದೆ.
ರಾಯಚೂರು ನಗರಸಭೆ ಕೆಲ ತಿಂಗಳ ಹಿಂದೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ್ದು, ನವೆಂಬರ್ 2ರಂದು ಅವಧಿ ಅಂತ್ಯವಾಗಲಿದೆ ಎಂಬ ಆತಂಕದಲ್ಲಿ ಇದ್ದ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಜೆ. ಸಾಜೀದ್ ಸಮೀರ್ ಹಾಗೂ ಸದಸ್ಯರು ಹೈಕೋರ್ಟ್ ಆದೇಶದಿಂದ ನಿರಾಳರಾಗಿದ್ದಾರೆ.







