ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸ್ವಾಗತಾರ್ಹ: ಬಿಜೆಪಿ ನಡೆಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಖಂಡನೆ

ರಾಯಚೂರು: ನಾಡಹಬ್ಬ ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆಯನ್ನು ವಿರೋಧಿಸಿ ನಾಡ ಹಬ್ಬದಲ್ಲಿ ಧರ್ಮದ್ವೇಷ ರಾಜಕಾರಣ ಮಾಡುವ ಬಿಜೆಪಿಯ ನಡೆ ಖಂಡನೀಯ ಎಂದು ಸಿಪಿಐಎಂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಜಿ.ವೀರೇಶ ತಿಳಿಸಿದ್ದಾರೆ.
ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ, ಕನ್ನಡದ ಹೆಸರಾಂತ ಬರಹಗಾರ್ತಿ ಬಾನು ಮುಷ್ತಾಕ್ ಆಯ್ಕೆಯನ್ನು ಸಿ.ಪಿ.ಐ (ಎಂ) ಸ್ವಾಗತಿಸುತ್ತದೆ. ಭಾರತೀಯ ಜನತಾ ಪಕ್ಷ ಎಂದಿನಂತೇ ಇಲ್ಲಿಯೂ ಧರ್ಮದ್ವೇಷ ರಾಜಕಾರಣ ಮಾಡುತ್ತಿರುವುದು ಖಂಡನೀಯವಾಗಿದೆ.
ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿ, ನಾಡಿನ ಸೌಹಾರ್ದ ಪರಂಪರೆಯನ್ನು ಪ್ರೀತಿಸುವ, ಗೌರವಿಸುವ ಬಾನುಮುಷ್ತಾಕ್ ರವರ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಇದು ಕನ್ನಡದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದೆ ಎಂದರು.
ನಾಡ ಹಬ್ಬ ದಸರಾವನ್ನು ಈ ಹಿಂದೆ ಖ್ಯಾತ ಕವಿ ನಿಸಾರ್ ಅಹ್ಮದ್ ರವರು ಉದ್ಘಾಟನೆ ಮಾಡಿದ್ದರು. ದಸರಾ ಕನ್ನಡ ನಾಡಿನ ಹಬ್ಬವೇ ಹೊರತೂ ಹಿಂದುತ್ವ ವಾದಿಗಳ ಹಬ್ಬವಲ್ಲ ಎಂಬುದನ್ನು ಬಿಜೆಪಿಯವರು ಅರ್ಥಮಾಡಿಕೊಂಡು ಕ್ಷುಲ್ಲಕ ರಾಜಕಾರಣವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದರು.





