ಹಟ್ಟಿ ಪಟ್ಟಣದಲ್ಲಿ ಬಸವಣ್ಣ-ಅಂಬೇಡ್ಕರ್ ಜಯಂತಿ ಆಚರಣೆ

ಹಟ್ಟಿ: ಪಟ್ಟಣದ ಪೈಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಜೆಎಂಎಸ್, ಎಸ್ಎಫ್ಐ, ಡಿವೈಎಫ್ಐ, ವತಿಯಿಂದ ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಜಗಜ್ಯೋತಿ ಬಸವಣ್ಣ ಅವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಪಕ್ಷದ ತಾಲೂಕು ಕಾರ್ಯದರ್ಶಿ ಕಾಂ. ರಮೇಶ ವೀರಾಪೂರು, ಬಸವೇಶ್ವರರು ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಒಂದೇ ಎಂದು ಹೇಳಿದರು.
ಜಾತಿ, ಧರ್ಮ, ಅಸಮಾನತೆ, ಲಿಂಗ ತಾರತಮ್ಯಗಳ ವಿರುದ್ಧ 12ನೇ ಶತಮಾನದಲ್ಲೇ ಬಸವಣ್ಣರು ತಮ್ಮ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ದಾರಿ ತೋರಿದರು ಎಂದರು.
ಡಾ. ಅಂಬೇಡ್ಕರ್ ಅವರು ಜೀವನದಲ್ಲಿ ಅಸ್ಪೃಶ್ಯತೆ ಅನುಭವಿಸಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಉನ್ನತ ಶಿಕ್ಷಣ ಪಡೆದು ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದರು. ಇಂದಿನ ಸಮಾಜಕ್ಕೆ ಬಸವಣ್ಣ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳು ಅತ್ಯಂತ ಅಗತ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘ ಹಟ್ಟಿ ಚಿನ್ನದ ಗಣಿ ಕಾರ್ಯದರ್ಶಿ ಕಾಂ. ಯಂಕೂಬ ಮಿಯಾಪೂರು, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಕಾಂ. ಪಂಚಲಯ್ಯ, ನಿಂಗಪ್ಪ ಎಂ ಮಾತನಾಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಜನಾವಾದಿ ಮಹಿಳಾ ಸಂಘಟನೆ ಮುಖಂಡರಾದ ಶಾಂತಕುಮಾರಿ, ದುರುಗಮ್ಮ , ಗಾಯತ್ರಿ, ಸಿಐಟಿಯು ತಾಲೂಕು ಮುಖಂಡರಾದ ಫಕೃದ್ದೀನ್, ವೆಂಕಟೇಶ ಗೋರಕಲ್, ಜಾನ್ ವೆಸ್ಲಿ, ಅಲ್ಲಾಭಕ್ಷ, ದಾವೂದ್, ಹಾಜಿಬಾಬು, ಶ್ರೀಧರ್, ಡಿವೈಎಫ್ಐ ಮುಖಂಡರಾದ ರಿಯಾಜ್ ಖುರೇಷಿ, ಶಂಶುದ್ದೀನ್, ಮಹಿಬು, ಎಸ್ಎಫ್ಐ ಮುಖಂಡರಾದ ರಮೇಶ ಭಜಂತ್ರಿ, ಮೌನೇಶ ಕಡ್ಡೋಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.






