ಒಳ ಮೀಸಲಾತಿ ಜಾರಿಗಾಗಿ ಬೆಳಗಾವಿ ಚಲೋ: ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ರಾಯಚೂರು: ಪರಿಶಿಷ್ಟ ಜಾತಿಗಳ ಸಂಪೂರ್ಣ ಒಳ ಮೀಸಲಾತಿ ಕಾನೂನಾತ್ಮಕವಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಯಚೂರು ನಗರದಿಂದ ಬೆಳಗಾವಿಗೆ ತೆರಳುತ್ತಿದ್ದ ಮಾದಿಗ ದಂಡೋರ ಸಂಘಟನೆಯ ಕಾರ್ಯಕರ್ತರನ್ನು ಲಿಂಗಸುಗೂರು ತಾಲೂಕಿನ ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಘಟನೆಯ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಚಲೋ ಹೋರಾಟದ ವೇಳೆ, ಕಾರ್ಯಕರ್ತರು ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದರು, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಾನೂನು ರೂಪದಲ್ಲಿ ಜಾರಿಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು.
ಚಳಿಗಾಲ ಅಧಿವೇಶನದಲ್ಲೇ ಸಂಪೂರ್ಣ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಹಾಗೂ ಮುಂದಿನ ರಾಜಕೀಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೂಕ್ತ ಮೀಸಲಾತಿ ಕಲ್ಪಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ ಎಂದು ಸಂಘದ ಮುಖಂಡರು ಸ್ಪಷ್ಟಪಡಿಸಿದರು.
ಈ ಹೋರಾಟದಲ್ಲಿ ರಂಜಿತ್ ದಂಡೋರ, ಕಾಶಪ್ಪ ಹೆಗ್ಗಣ್ಗೆರ, ಗಂಗಣ್ಣ ಸಿದ್ದಾಪುರ, ದುಳ್ಳಯ್ಯ ಗುಂಜಹಳ್ಳಿ, ಜಕ್ರಪ್ಪ ಹಂಚಿನಾಳ, ಭೀಮೇಶ್ ತುಂಟಾಪುರ, ಯಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.





