ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ್ ವಿರುದ್ಧ ಸಭಾಪತಿಗೆ ಭೀಮ್ ಆರ್ಮಿ ದೂರು

ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ್ ಅವರು ಅನಧಿಕೃತವಾಗಿ ಪ್ರವಾಸಿ ಮಂದಿರಕ್ಕೆ ಶಾಸಕರ ಕಾರ್ಯಾಲಯವೆಂದು ನಾಮಫಲಕ ಹಾಕಿಕೊಂಡು ಸಂಘ ಸಂಸ್ಥೆಗಳಿಗೆ ಸಭೆ ಮಾಡಲು ಅವಕಾಶ ನೀಡುತ್ತಿಲ್ಲ. ಶಾಸಕಿಯ ವಿರುದ್ಧ ದೂರು ನೀಡಿದರೆ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ ಎಂದು ಭೀಮ್ ಆರ್ಮಿ ದೇವದುರ್ಗ ತಾಲೂಕು ಘಟಕದ ವತಿಯಿಂದ ಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ದೂರನ್ನು ಸಲ್ಲಿಸಲಾಯಿತು.
ಭೀಮ್ ಆರ್ಮಿ ದೇವದುರ್ಗ ತಾಲೂಕು ಅಧ್ಯಕ್ಷ ವಿಶ್ವನಾಥ್ ಅವರು ಮಾತನಾಡಿ, ಕಳೆದ ಡಿ.12ರಂದು ಶಾಸಕರು ತಮ್ಮ ವಕೀಲರ ಮೂಲಕ ನನಗೆ ಲೀಗಲ್ ನೋಟೀಸ್ ಕಳುಹಿಸಿ ನನ್ನ ಮೇಲೆ ಪ್ರಕರಣ ದಾಖಲಿಸುತ್ತೇವೆಂದು ಬೆದರಿಕೆ ಹಾಕುತಿದ್ದಾರೆ. ಕಳೆದ ಒಂದು ವರ್ಷದಿಂದ ಆಡಳಿತಾತ್ಮಕವಾಗಿ ಪ್ರಶ್ನೆ ಮಾಡಿದ ಕಾರಣ ಶಾಸಕರ ಬೆಂಬಲಿಗರಿಂದ ನನಗೆ ಜೀವ ಬೆದರಿಕೆ ಕರೆ ಬರುತ್ತಿದೆ. ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಮಾಹಾನಿರ್ದೇಶಕರಿಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಂಡಿರುವುದಿಲ್ಲ. ನನ್ನ ಜೀವಕ್ಕೆ ಅಪಾಯವುಂಟಾದರೆ ಶಾಸಕಿ ಕರೆಮ್ಮ ಜಿ.ನಾಯಕರೆ ಕಾರಣ ಎಂದು ಹೇಳಿದರು.
ಈ ವೇಳೆ ಬಾಬ ಖಾನ್, ಸಿ.ದೀಪಕ್ ಭಂಡಾರಿ, ಎಚ್.ಎಮ್.ಬಾಬು, ಕರಿಯಪ್ಪ ಮಾರ್ಕೆಲ್ ಉಪಸ್ಥಿತರಿದ್ದರು.
ಶಾಸಕಿ ಕರೆಮ್ಮಾ ನಾಯಕ್ ಸ್ಪಷ್ಟನೆ: ದಾಖಲೆ ಇಲ್ಲದೆ ಇನ್ನೊಬ್ಬರ ಬಗ್ಗೆ ಅರೋಪ ಮಾಡುವುದು ಸಮಂಜಸವಲ್ಲ. ದಾಖಲೆಗಳು ಇದ್ದರೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲಿ. ಅದಕ್ಕೆ ನನ್ನ ಬೆಂಬಲವಿದೆ. ದಾಖಲೆ ಇಲ್ಲದೆ ನನ್ನ ಬಗ್ಗೆ ಸಭಾಪತಿಗಳಿಗೆ ದೂರು ನೀಡುವುದು ಬಿಟ್ಟು ದಾಖಲೆ ತೆಗೆದುಕೊಂಡು ಬರಲಿ, ಎದುರಿಸಲು ನಾನು ಸಿದ್ದಳಿದ್ದೇನೆ. ನನ್ನ ಮಕ್ಕಳು, ಮನೆಯವರು ಬೆದರಿಕೆ ಹಾಕಿದರೆ ಕಾನೂನು ಚೌಕಟ್ಟಲ್ಲಿ ಹೋರಾಟ ಮಾಡಲಿ. ನನ್ನ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ನನ್ನಮತದಾರರ ಋಣ ತೀರಿಸಲಾಗದು. ನಾನು ಇರುವವರೆಗೂ ಪ್ರಾಮಾಣಿಕ ಸೇವೆ ಮಾಡುವೆ ಎಂದು ಶಾಸಕಿ ಕರೆಮ್ಮಾ ಜಿ ನಾಯಕ ಸ್ಪಷ್ಟನೆಯನ್ನು ನೀಡಿದ್ದಾರೆ.







