ಬರಗಾಲ ಕುರಿತು ಚರ್ಚೆಗೆ ಸರಕಾರ ವಿಶೇಷ ಅಧಿವೇಶನ ಕರೆಯಲಿ: ವಿಜಯೇಂದ್ರ ಒತ್ತಾಯ
ಬಿಜೆಪಿಯ 'ಬಳ್ಳಾರಿ ಚಲೋ ಪಾದಯಾತ್ರೆ' 3ನೇ ದಿನಕ್ಕೆ

ರಾಯಚೂರು: ನಾಡಿನ ರೈತರ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು, ಬರಗಾಲದ ಪರಿಸ್ಥಿತಿ ಕುರಿತು ಚರ್ಚೆ ಮಾಡಲು ರಾಜ್ಯ ಸರಕಾರ ವಿಶೇಷ ಅಧಿವೇಶನ ಕರೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ನವಲಿ ಜಲಾಶಯ, ನಂದವಡಿ ಏತ ನೀರಾವರಿ ಆಗಬೇಕೆಂದು ಆಗ್ರಹಿಸಿ, ಬರ, ರೈತರ ಆತ್ಮಹತ್ಯೆ ಹಾಗೂ ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ 3ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆಯು ಗುಡದೂರಿನಿಂದ ಬೆಳಿಗ್ಗೆ ಆರಂಭವಾಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳೇ ರಾಜ್ಯದ ಅಭಿವೃದ್ಧಿ ಎಂಬಂತೆ ರಾಜ್ಯದ ಕಾಂಗ್ರೆಸ್ ಸರಕಾರ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ. ಬರಗಾಲದ ಕಾರಣ 5 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ರೈತರ ನೆರವಿಗಾಗಿ ಹೊಸ ಜಲಾಶಯ
ಹೊಸಪೇಟೆ ಡ್ಯಾಮಿನಲ್ಲಿ 31 ಟಿಎಂಸಿ ಹೂಳು ತುಂಬಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಪಿಆರ್ ಗೆ ಹಣ ಕೊಟ್ಟಿದ್ದರು; ನವಲಿ ಸಮಾನಾಂತರ ಜಲಾಶಯಕ್ಕೆ ಆದ್ಯತೆ ನೀಡಲು ಪ್ರಯತ್ನ ಮಾಡಿದ್ದರು ಎಂದು ಗಮನ ಸೆಳೆದರು. 190ಕ್ಕೂ ಹೆಚ್ಚು ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯೂ ಇಲ್ಲ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಗೆ ರೈತರ ಬಗ್ಗೆ ಕಾಳಜಿಯೂ ಇಲ್ಲ. ಹೋರಾಟದ ಹಿನ್ನೆಲೆಯೂ ಇಲ್ಲ. ಗ್ರಾಮೀಣ ಭಾಗದ ರೈತರ ಸಮಸ್ಯೆ ಏನೆಂದು ಅರ್ಥ ಮಾಡಿಕೊಳ್ಳಲು ಆಗಿಲ್ಲ. ಹಿಂದೆ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವರಾದುದರಿಂದ ರೈತರ ಸಂಕಷ್ಟಕ್ಕೆ ಸಮಯ ಕೊಡಲು ಆಗಿಲ್ಲ ಎಂದು ನುಡಿದರು. ರಿಯಲ್ ಎಸ್ಟೇಟ್ ಕಡೆ ಹೆಚ್ಚು ಗಮನ ಕೊಡುವ ಮುಖ್ಯಮಂತ್ರಿಗಳು ಅದರಲ್ಲಿ ಶೇ 25ರಷ್ಟಾದರೂ ಸಮಯವನ್ನು ಈ ನಾಡಿನ ಅನ್ನದಾತನ ಬಗ್ಗೆ ಗಮನಿಸಬೇಕು. ಬರಗಾಲ ಭೀಕರವಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಆಗ್ರಹಿಸಿದರು.
ದಲಿತರ ಅಭಿವೃದ್ಧಿಗಾಗಿ ಬಳಕೆ ಆಗಬೇಕಾದ ಎಸ್ಸಿಪಿ, ಟಿಎಸ್ಪಿ ಹಣವನ್ನು ಬೇರೆ ಬೇರೆ ಇಲಾಖೆಗಳಿಗೆ ಬಳಸುತ್ತಿದ್ದಾರೆ. ದಲಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸದ ಸರಕಾರ ಇದಾಗಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರದ ಅಧಿಕಾರದ 3 ವರ್ಷಗಳಲ್ಲಿ ಕರ್ನಾಟಕದಲ್ಲಿ 3655 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಸುಮಾರು 294 ರೈತರು, ರಾಯಚೂರು ಜಿಲ್ಲೆ 160ಕ್ಕೂ ಹೆಚ್ಚು, ಬೀದರ್- 220ಕ್ಕೂ ಹೆಚ್ಚು, ಕೊಪ್ಪಳ ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 937 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಈ ವಿಚಾರವನ್ನು ಗಮನಿಸಬೇಕೆಂದು ತಿಳಿಸಿದರು.
ಜೋಳಕ್ಕೆ 145 ಕೋಟಿ ರೂ. ಮೊತ್ತ ಬಾಕಿ
ರಾಯಚೂರು ಭಾಗದಲ್ಲಿ ಖರೀದಿಸಿದ ಜೋಳಕ್ಕೆ 145 ಕೋಟಿರೂ> ಮೊತ್ತ ಬಾಕಿ ಇದೆ ಎಂದು ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿಯವರು ಹೇಳಿದ್ದಾರೆಂದು ಗಮನ ಸೆಳೆದರು. ಹೈನುಗಾರಿಕೆಗೆ ಯಡಿಯೂರಪ್ಪರ ನೇತೃತ್ವದ ಹಿಂದಿನ ಬಿಜೆಪಿ ಸರಕಾರವು ಸಹಾಯಧನ ನೀಡುತ್ತಿತ್ತು. ಕಾಂಗ್ರೆಸ್ ಸರಕಾರ ಆ ಸಹಾಯಧನವನ್ನೂ ನೀಡದೇ ಸಂಕಷ್ಟದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷ ಎಂ. ನಾಗರಾಜ್, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಎಚ್. ಪಾಟೀಲ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಶಾಸಕ ಡಾ. ಶಿವರಾಜ್ ಪಾಟೀಲ್, ಮಾಜಿ ಸಚಿವರು ಮತ್ತು ಶಾಸಕರಾದ ಸುನೀಲ್ಕುಮಾರ್, ಸಿ.ಸಿ.ಪಾಟೀಲ್, ಶಾಸಕರಾದ ಮಾನಪ್ಪ ವಜ್ಜಲ್, ಡಾ.ಶಿವರಾಜ್ ಪಾಟೀಲ್, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜಾ, ಮಾಜಿ ಸಚಿವ ಶಿವನಗೌಡ ನಾಯಕ, ಮಾಜಿ ಶಾಸಕರಾದ ಪ್ರತಾಪ ಗೌಡ ಪಾಟೀಲ್, ರಾಜೇಗೌಡ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಮತ್ತು ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ.






