ಹಟ್ಟಿ ಚಿನ್ನದ ಗಣಿಯಲ್ಲಿ ಕಪ್ಪು ಬಾವುಟ ಪ್ರತಿಭಟನೆ 11ನೇ ದಿನಕ್ಕೆ

ಹಟ್ಟಿ, ಜೂನ್ 13: ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಪ್ರಮುಖ ಬೇಡಿಕೆಗಳಾದ ಮೆಡಿಕಲ್ ಅನ್‌ಫಿಟ್ ಯೋಜನೆಯನ್ನು ಕೂಡಲೇ ಜಾರಿಗೊಳಿಸುವುದು, ಹೊಸ ವೇತನ ಒಪ್ಪಂದವನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಕಪ್ಪು ಬಾವುಟ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ.
ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಹಾಗೂ ಕಪ್ಪು ಬಾವುಟಗಳನ್ನು ಹಿಡಿದು ಪ್ರತಿಭಟಿಸುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ ಕಾರ್ಮಿಕರು, ಆಡಳಿತ ಮಂಡಳಿ ಮತ್ತು ಸರ್ಕಾರದ ವಿಳಂಬ ನೀತಿಯನ್ನು ತೀವ್ರವಾಗಿ ಖಂಡಿಸಿದರು.
ಬಾಕಿ ಇರುವ ಆಹಾರ ಪೊಟ್ಟಣ (ಫುಡ್ ಕಿಟ್) ವಿತರಣೆ, ಮನೆ ಬಾಡಿಗೆ ಭತ್ಯೆ (HRA), ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಧನ (PLIB) ಹಾಗೂ ಎಕ್ಸ್‌ಗ್ರೇಷಿಯಾ ಸೌಲಭ್ಯಗಳನ್ನು ನೀಡುವುದು ಸೇರಿವೆ.
ಕಾರ್ಮಿಕರ ಹಕ್ಕುಗಳು ಮತ್ತು ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಹಾಗೂ ಆಡಳಿತದ ಗಮನ ಸೆಳೆಯಲು ಹಂತ ಹಂತವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ, ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ ಎಂದು ಸಂಘದ ಮುಖಂಡರು ಆರೋಪಿಸಿದರು.
ಇತ್ತೀಚೆಗೆ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ನಿರಂತರ ಒತ್ತಾಯದ ಫಲವಾಗಿ ಜೂನ್ 2025ರಿಂದ ಫೆಬ್ರವರಿ 2026ರವರೆಗೆ ಬಾಕಿ ಇರುವ 12 ತಿಂಗಳ ಆಹಾರ ಪೊಟ್ಟಣಗಳನ್ನು ಹಂತ ಹಂತವಾಗಿ ವಿತರಿಸಲು ಆಡಳಿತ ಒಪ್ಪಿಗೆ ನೀಡಿರುವುದು ಕಾರ್ಮಿಕರ ಹೋರಾಟದ ಮೊದಲ ಗೆಲುವಾಗಿದೆ ಎಂದು ಸಂಘ ತಿಳಿಸಿದೆ. ಆದಾಗ್ಯೂ, ಉಳಿದ ಪ್ರಮುಖ ಬೇಡಿಕೆಗಳ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟವಾಗದಿರುವುದರಿಂದ ಹೋರಾಟ ಮುಂದುವರಿಸಲಾಗುತ್ತಿದೆ ಎಂದು ತಿಳಿಸಲಾಯಿತು.
ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಹೋರಾಟಕ್ಕೆ ಅಂತ್ಯ ಹಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಆನ್ವರಿ, ಕಾರ್ಯದರ್ಶಿಗಳಾದ ವೆಂಕೋಬ್ ಮಿಯ್ಯಾಪೂರು, ಗೌಸ್ ಮಿಯಾ, ಜಮದಗ್ನಿ ರಮೇಶ ಬಾಬು, ನಾಗರಾಜ್, ಸಿದ್ದಪ್ಪ ಮುಂಡರಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಬು ಸಾಗರ್, ಮುನೀರುದ್ದೀನ್, ಹನುಮಂತಗೌಡ, ಗುಂಡಪ್ಪಗೌಡ, ಗುರುರಾಜ್, ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ ರಮೇಶ ವೀರಾಪೂರು, ಮೈನುದ್ದೀನ್, ಎಐಟಿಯುಸಿ ಮುಖಂಡ ಸಂಗಯ್ಯಸ್ವಾಮಿ, ಸಿಐಟಿಯು ಮುಖಂಡರಾದ ಫಕೃದ್ದೀನ್, ವೆಂಕಟೇಶ ಗೋರ್‌ಕಲ್, ಪೆಂಚಲಯ್ಯ, ಬಾಬು ಭೂಪೂರು, ಸೋಮಣ್ಣ ನಾಯಕ್, ರಾಜೇಶ್ವರಿ, ಹನುಮಂತ್ರಾಯ, ಹುಸೇನ್ ಬಾಷಾ, ಬಸವರಾಜ್ ಎಂ.ಎಂ., ದುರಗಪ್ಪ, ಶ್ರೀಧರ್, ಅಲ್ಲಾಭಕ್ಷ, ಯಮನೂರು, ರಾಜ್ ಮಹ್ಮದ್, ಖಾಜಾ, ರಫಿ ಮಲ್ಲಾಫೂರು, ಬಸವರಾಜ್ ನಗನೂರು, ಅಲೆಕ್ಸಾಂಡರ್ ಸೇರಿದಂತೆ ಸಿಐಟಿಯು, ಎಐಟಿಯುಸಿ ಹಾಗೂ ಇತರೆ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.






