ರಕ್ತಕ್ಕೆ ಜಾತಿಯಿಲ್ಲ, ಮಾನವ ಧರ್ಮಕ್ಕೆ ಮೊದಲ ಆದ್ಯತೆ ನೀಡಿ: ಡಿವೈಎಸ್ಪಿ ಬಿ.ಎಸ್.ತಳವಾರ
ಸಿಂಧನೂರು: ರಕ್ತಕ್ಕೆ ಜಾತಿ, ಧರ್ಮ ಇಲ್ಲ. ಯಾವುದೇ ರೋಗಿಗೆ ರಕ್ತದ ಅವಶ್ಯಕತೆ ಉಂಟಾದಾಗ ಆತನಿಗೆ ರಕ್ತದ ಅವಶ್ಯವಿರುತ್ತದೆ ಹೊರತು ಜಾತಿ ಮುಖ್ಯವಾಗುವುದಿಲ್ಲ. ಮನುಷ್ಯರು ಮಾನವ ಧರ್ಮಕ್ಕೆ ಮೊದಲು ಬೆಲೆ ಕೊಡಬೇಕು ಅಂದಾಗ ಮಾತ್ರ ಸೌಹಾರ್ದತೆ ಸಮಾಜ ನಿರ್ಮಿಸಲು ಸಾಧ್ಯ ಎಂದು ಡಿವೈಎಸ್ಪಿ ಬಿ.ಎಸ್.ತಳವಾರ ಅಭಿಪ್ರಾಯಪಟ್ಟರು
ಮಂಗಳವಾರ ಸಿಂಧನೂರಿನ ಸೀರತ್ ಸಮಿತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ, ರಕ್ತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಸಮಾಜದ ಹಿರಿಯರು ಆಯಾ ಸಮಾಜದ ಯುವಕರಲ್ಲಿ ಸಾಮಾಜಿಕ ಸೇವೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಯುವಕರ ಮನಸ್ಥಿತಿಯನ್ನ ಬದಲಾಯಿಸಿ, ಸರಿದಾರಿಗೆ ತರುವ ಕೆಲಸ ಮಾಡಬೇಕು ಆ ನಿಟ್ಟಿನಲ್ಲಿ ಸೀರತ್ ಸಮಿತಿಯವರು ರಕ್ತದಾನದಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.
ನೇತ್ರತಜ್ಞ ಡಾ.ಚೆನ್ನನಗೌಡ ಪಾಟೀಲ್ ಮಾತನಾಡಿ, ಸಿಂಧನೂರಿನಲ್ಲಿ ಪ್ರತಿದಿನ ರಕ್ತದ ಅವಶ್ಯಕತೆ ಹೆಚ್ಚಿದ್ದು, ರಕ್ತದಾನ ಮಾಡುವವರ ಸಂಖ್ಯೆಯೂ ಹೆಚ್ಚಾಗಬೇಕಿದೆ. ರಕ್ತದಾನದಂತಹ ಕಾರ್ಯಕ್ರಮಗಳಲ್ಲಿ ಯುವಕರು ಭಾಗವಹಿಸಿ, ಸಮಾಜ ಸೇವೆಗೆ ಮುಂದಾಗಬೇಕು ಎಂದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿ ಡಾ. ನಾಗರಾಜ ಕಾಟ್ವಾ ಮಾತನಾಡಿ, ಮನುಷ್ಯ ಆರೋಗ್ಯವಂತನಾಗಿರಲು ರಕ್ತದಾನ ಅವಶ್ಯಕ. ಸದೃಢ ದೇಹಕ್ಕೆ ರಕ್ತದಾನ ಸಹಕಾರಿಯಾಗಿದೆ. ರಕ್ತದಾನದಿಂದ ಹಳೇ ರಕ್ತ ಹೋಗಿ, ಹೊಸ ರಕ್ತದ ಉತ್ಪತ್ತಿ ಹೆಚ್ಚಾಗಿ, ಹೃದಯಘಾತದಂತಹ ಕಾಯಿಲೆಗಳು ಕಡಿಮೆಯಾಗುತ್ತವೆ. ಮನುಷ್ಯ ಪರೋಪಕಾರಿಯಾದಾಗ ಮಾತ್ರ ಬದುಕಿಗೊಂದು ಅರ್ಥ ಬರಲು ಸಾಧ್ಯ ಎಂದರು.
ಸೀರತ್ ಸಮಿತಿಯ ಅಧ್ಯಕ್ಷ ಸೈಯದ್ ಬಾಬರ್ ಪಾಷಾ ವಕೀಲ ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಸೀರತ್ ಸಮಿತಿಯ ಸಂಚಾಲಕ ಸೈಯದ್ ಖಾದರ್ ಸುಭಾನಿ, ಡಾ.ಸುರೇಶ ಗೌಡ, ಮುಖಂಡರಾದ ಮೆಹಬೂಬ್ ಖಾನ್ ಸಾಬ್, ಜಾಫರ್ ಅಲಿ ಜಾಹಗೀರದಾರ್, ಕೆ.ಜಿಲಾನಿಪಾಷಾ, ಎಂ.ಡಿ.ನದೀಮುಲ್ಲಾ, ಹುಸೇನ್ ಸಾಬ, ಸೈಯದ್ ಮಿಟ್ಟಿಮನಿ, ಸೈಯದ್ ಹಾರೂನ್ ಸಾಹೇಬ್, ಶಫೀವುಲ್ಲಾಖಾನ್, ಫಯಾಜ್ ಪೀರಾ ಸೇರಿದಂತೆ ಅನೇಕರು ಇದ್ದರು.
ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನರು ಭಾಗವಹಿಸಿ ರಕ್ತದಾನ ಮಾಡಿದರು. ಸನ್ ರೈಸ್ ಕಾಲೇಜಿನ ವಿದ್ಯಾರ್ಥಿಗಳು ಆರೋಗ್ಯ ಸೇವೆಯಲ್ಲಿ ಭಾಗವಹಿಸಿದ್ದರು.









