ಸೆ.22ರಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಯುವುದು ನಿಶ್ಚಿತ, ಗೊಂದಲ ಬೇಡ : ಸಚಿವ ಎನ್.ಎಸ್.ಭೋಸರಾಜು

ಎನ್.ಎಸ್.ಭೋಸರಾಜು
ರಾಯಚೂರು ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಜಾತಿ ಸಮೀಕ್ಷೆ ನಡೆಯುವುದು ನಿಶ್ಚಿತವಾಗಿದೆ. ಈ ಕುರಿತು ಯಾವುದೇ ಗೊಂದಲಗಳಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.
ಶುಕ್ರವಾರ ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಸಮೀಕ್ಷೆ ವಿಚಾರವಾಗಿ ಯಾವುದೇ ಗಲಾಟೆಗಳು ನಡೆದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಜಾತಿ ಸಮೀಕ್ಷೆ ಕುರಿತ ಗೊಂದಲಗಳನ್ನು ನಿವಾರಣೆ ಮಾಡಲು ಸರ್ಕಾರ ಬದ್ಧವಾಗಿದೆ. ಸೆ.22ರಿಂದ ಸಮೀಕ್ಷೆ ಪ್ರಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ಯಾವಾಗಲೂ ಜನಪರ ಮಾತುಗಳನ್ನು ಆಡೋದಿಲ್ಲ. ಜನರಲ್ಲಿ ಗೊಂದಲ ಸೃಷ್ಟಿ ಮಾಡುವುದು ಅವರ ಕೆಲಸ. ಶೋಭಾ ಕರಂದ್ಲಾಜೆಯ ಮಾತುಗಳಿಗೆ ಅರ್ಥವಿಲ್ಲ. ಅದರಿಂದ ಯಾವ ಸಂದೇಶವೂ ಹೋಗುವುದಿಲ್ಲ ಎಂದು ಹೇಳಿದರು.
ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಸಾಕ್ಷಿಗಳನ್ನು ಮಂಡಿಸಿದ್ದಾರೆ. ಚುನಾವಣಾ ಆಯೋಗವು ತನಿಖೆ ನಡೆಸಬೇಕು. ಆದರೆ ಕೇಂದ್ರ ಸರ್ಕಾರ ಎಲ್ಲ ತನಿಖಾ ಸಂಸ್ಥೆಗಳನ್ನು ತನ್ನ ವಶದಲ್ಲಿಟ್ಟುಕೊಂಡಂತೆ ಚುನಾವಣಾ ಆಯೋಗವನ್ನೂ ಹಿಡಿತದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಆರೋಪಿಸಿದರು.







