ಅ.4ರಂದು ರಾಯಚೂರಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ಸಾಧ್ಯ: ಡಿಸಿ ಪೂವಿತಾ ಎಸ್.

ರಾಯಚೂರು: ಅಕ್ಟೋಬರ್ ಮೊದಲ ವಾರದಲ್ಲಿ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಲಿದ್ದು, ಮೊದಲ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾದ ರಾಯಚೂರು ಜಿಲ್ಲೆಯ ತಾಲೂಕುಗಳಿಗೆ ಅಕ್ಟೋಬರ್ 4ರಂದು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ತಂಡದ ಭೇಟಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜೋಳ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಬಾಕಿ ಇರುವ ಮೊತ್ತವನ್ನು ಒಂದು ವಾರದೊಳಗೆ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಕಂದಾಯ, ಪೊಲೀಸ್ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಸಮನ್ವಯ ಸಾಧಿಸಿ ತುಂಗಭದ್ರ ಎಡದಂಡೆ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ತುಂಗಭದ್ರ ಎಡದಂಡೆ ಕಾಲುವೆಯ ವಿಭಾಗವಾರು ಹೂಳು ತೆಗೆಯಲು ಅಂದಾಜುಪಟ್ಟಿ (ಎಸ್ಟಿಮೇಟ್) ಸಲ್ಲಿಸುವಂತೆ ಸೂಚಿಸಿದ ಅವರು, ನಾರಾಯಣಪುರ ಬಲದಂಡೆ ಕಾಲುವೆ ಸಮಸ್ಯೆಗಳ ಕುರಿತು ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಹಾಗೂ ನಾರಾಯಣಪುರ ಜಲಾಶಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಮುಂಗಾರು ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಬರಗಾಲ ಉಂಟಾಗಿದ್ದು, ರೈತರು ಹಾಗೂ ಕೃಷಿ ಕೂಲಿಕಾರರು ಸಂಕಷ್ಟದಲ್ಲಿದ್ದಾರೆ. ಅಲ್ಪ ಮಳೆಯಿಂದ ತೊಗರಿ, ಹತ್ತಿ, ಸಜ್ಜೆ ಹಾಗೂ ಸೂರ್ಯಕಾಂತಿ ಬೆಳೆಗಳಿಗೆ ಹಾನಿಯಾಗಿರುವುದರಿಂದ ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳಬೇಕು. ಅಧಿಕಾರಿಗಳು ಬೆಳೆಹಾನಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸಂಬಂಧಪಟ್ಟ ಇಲಾಖೆಗಳು ಎಚ್ಚರಿಕೆ ವಹಿಸಬೇಕು. ಭೂ ದಾಖಲೆ ಹೊಂದಿರುವ ಎಲ್ಲ ಅರ್ಹ ರೈತರಿಗೆ ಬರ ಪರಿಹಾರ ತಲುಪುವಂತೆ ಅಗತ್ಯ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಹೇಳಿದರು.
ರಾಯಚೂರು ತಾಲೂಕಿಗೆ ದಿನಕ್ಕೆ 9 ರಿಂದ 10 ಗಂಟೆಗಳ ಕಾಲ ಹಾಗೂ ಉಳಿದ ತಾಲೂಕುಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ರೈತ ಮುಖಂಡರ ಮನವಿ :
ಸಭೆಯಲ್ಲಿ ರೈತ ಮುಖಂಡರು ಬರಪೀಡಿತ ಪ್ರದೇಶಗಳ ರೈತರಿಗೆ ಬೆಳೆಹಾನಿ ಪರಿಹಾರವನ್ನು ತಕ್ಷಣ ಅವರ ಖಾತೆಗೆ ಜಮಾ ಮಾಡಬೇಕು, ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.
ತುಂಗಭದ್ರ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳ ಉಪಕಾಲುವೆಗಳಲ್ಲಿನ ಹೂಳು ಮತ್ತು ಕಾಡು ತೆರವುಗೊಳಿಸಿ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಹರಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಜೋಳ ಖರೀದಿ ಕೇಂದ್ರಗಳಲ್ಲಿ ಜೋಳ ಮಾರಾಟ ಮಾಡಿದ ರೈತರಿಗೆ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ನಾರಾಯಣಪುರ ಬಲದಂಡೆ ಕಾಲುವೆಯ ವಾರಾಬಂದಿ ಪದ್ಧತಿಯನ್ನು 7 ದಿನ ಬಂದ್, 14 ದಿನ ಚಾಲು ಮಾದರಿಯಲ್ಲಿ ಜಾರಿಗೊಳಿಸುವಂತೆ ರೈತ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಿಂಗಸುಗೂರು ಸಹಾಯಕ ಆಯುಕ್ತ ನಾಗೇಂದ್ರ ಬಾಬು ಕುಮಾರ್, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ಆಹಾರ ಇಲಾಖೆಯ ಉಪ ನಿರ್ದೇಶಕ ನಜೀರ್ ಅಹ್ಮದ್ ಕನವಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚವ್ಹಾಣ್, ಪಶು ಇಲಾಖೆಯ ಉಪ ನಿರ್ದೇಶಕ ಪೋಮ್ ಸಿಂಗ್, ಕೆ.ಬಿ.ಜೆ.ಎಲ್. ವಿಭಾಗ ಇಇ ಈಶ್ವರ, ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಸೇರಿದಂತೆ ರೈತ ಮುಖಂಡರಾದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭಾಕರ ಪಾಟೀಲ್ ಇಂಗಳದಾಳ, ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ದೊಡ್ಡ ಬಸನಗೌಡ ಬಲ್ಲಟಗಿ, ಸೂಗುರಯ್ಯ ಆರ್.ಎಸ್. ಮಠ, ವೆಂಕಪ್ಪ ಕಾರಬಾರಿ, ಬಸವರಾಜ ಮಾಲಿ ಪಾಟೀಲ್, ಮಲ್ಲಣ ದಿನ್ನಿ, ಹಾಜಿ ಮಸ್ತಾನ್ ಸೇರಿದಂತೆ ಇತರರು ಇದ್ದರು.






