ರಾಯಚೂರು | ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿರುವುದರ ಹಿಂದೆ ಕಾರ್ಖಾನೆ ಮಾಲಕರ ಸಂಚಿದೆ : ಚಾಮರಸ ಮಾಲೀಪಾಟೀಲ್

ರಾಯಚೂರು: ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಸಕ್ಕರೆ ಕಾರ್ಖಾನೆ ಬಳಿ 60ರಿಂದ 70 ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಇದರ ಹಿಂದೆ ಸರಕಾರದ ಗೊಂದಲ ಹಾಗೂ ಕಾರ್ಖಾನೆ ಮಾಲಕರ ಸಂಚು ಅಡಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಆರೋಪಿಸಿದರು.
ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಾಮರಸ ಮಾಲೀಪಾಟೀಲ್, ಕಬ್ಬು ಬೆಳೆಗಾರರು ಶಾಂತ ರೀತಿಯಲ್ಲಿ ಹೋರಾಟ ಮಾಡುತ್ತಿದ್ದರು, ಪ್ರತಿಭಟನೆ ವೇಳೆ ಏಕಾಏಕಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಕೃತ್ಯ ಯಾರೇ ಮಾಡಿದ್ದರೂ ರೈತ ಸಂಘ ಅದನ್ನು ಖಂಡಿಸುತ್ತದೆ. ಈ ಘಟನೆ ಬಗ್ಗೆ ಸಾಕಷ್ಟು ಜನರು ರೈತರೇ ಬೆಂಕಿ ಹಚ್ಚಿದ್ದಾರೆ ಎಂದು ಹೇಳುತ್ತಿದ್ದು, ತಾವು ಬೆಳೆದ ಬೆಳೆಗೆ ತಾವೇ ಬೆಂಕಿ ಹಚ್ಚುವ ಕೆಲಸ ರೈತರು ಮಾಡುವುದಿಲ್ಲ. ಕಾರ್ಖಾನೆ ಮಾಲಕರ ವ್ಯವಸ್ಥಿತವಾದ ಸಂಚು ಈ ಘಟನೆಗೆ ಕಾರಣವಾಗಿದ್ದು, ಘಟನೆಗೂ ಮುನ್ನ ಕಾರ್ಖಾನೆಯಲ್ಲಿ ಸಾಕಷ್ಟು ಜನ ಗೂಂಡಾಗಳನ್ನು ಇರಿಸಿಕೊಂಡು ಸಂಚು ರೂಪಿಸಲಾಗಿದೆ. ಕೂಡಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಘಟನೆಗೆ ಕಾರಣರಾದವರೂ ಯಾರೇ ಆಗಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮವಾಗಬೇಕು. ನಷ್ಟ ಉಂಟಾದ ರೈತರಿಗೆ ಪರಿಹಾರ ನೀಡಬೇಕು. ರೈತರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 5.50 ಎಕರೆ ಪ್ರದೇಶದಲ್ಲಿ ಹತ್ತಿಯನ್ನು ಬೆಳೆಯಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹತ್ತಿ ಬೆಳೆ ಗಣನೀಯವಾಗಿ ಹೆಚ್ಚಳವಾಗಿದ್ದು, ಸರಕಾರದಿಂದ 2110 ರೂ.ಬೆಂಬಲ ಬೆಲೆ ಯೋಜನೆಯಲ್ಲಿ ಹತ್ತಿ ಖರೀದಿ ಮಾಡುತ್ತಿದ್ದು, ಆದರೆ ಮುಕ್ತ ಮಾರುಕಟ್ಟೆಯಲ್ಲಿ 3300ರೂ. ಕ್ವಿಂಟಾಲ್‍ಗೆ ನೀಡಲಾಗುತ್ತಿದೆ. ಖರೀದಿ ಕೇಂದ್ರದಲ್ಲಿ ರೈತರಿಗೆ ಸ್ಲಾಟ್ ಮಾಡಿಕೊಳ್ಳಲು 30 ಸೆಕೆಂಡ್ ಕಾಲಾವಕಾಶ ನೀಡಲಾಗಿದ್ದು, ಇಷ್ಟು ಕಡಿಮೆ ಸಮಯದಲ್ಲಿ ರೈತರು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ತೂಕದಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ಅನ್‍ಲೋಡ್ ಸಮಯದಲ್ಲಿ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ. ಖರೀದಿ ಕೇಂದ್ರ ಮತ್ತು ಮುಕ್ತ ಮಾರುಕಟ್ಟೆಯ ಈ ನಡೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿದೆ, ಸರಕಾರದಿಂದ ವೈಮಾನಿಕ ಸಮೀಕ್ಷೆ ನಡೆಸಲಾಗಿದ್ದು, ಈವರೆಗೂ ಪರಿಹಾರ ಘೋಷಣೆಯಾಗಿಲ್ಲ. ಕೇಂದ್ರದಿಂದ ಹಣ ಬಂದರೂ ಪರಿಹಾರ ನೀಡಲು ಸರಕಾರ ಮುಂದಾಗುತ್ತಿಲ್ಲ. ಜಿಲ್ಲೆಯ ಈ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಕೈಗೆ ಸಿಗುವುದಿಲ್ಲ. ಇಲ್ಲಿನ ಮಂತ್ರಿಗಳು ಶಾಸಕರೂ ಕೂಡ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ, ಬೂದಯ್ಯ ಸ್ವಾಮಿ, ದೇವರಾಜ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







