ಜೂ.23 ರಂದು ಮುಖ್ಯಮಂತ್ರಿಗಳಿಂದ ರಾಯಚೂರು ಜಿಲ್ಲಾ ಪ್ರವಾಸ : ಶಾಸಕ ಬಸನಗೌಡ ದದ್ದಲರಿಂದ ಪೂರ್ವ ಸಿದ್ಧತಾ ಸಭೆ

ರಾಯಚೂರು: ಜೂ.23 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಯರಗೇರಾ ಹೋಬಳಿಯಲ್ಲಿ ಬುಡಕಟ್ಟು ಉತ್ಸವ, 371 ಜೆ ಕಲಂ ಜಾರಿಯ ದಶಮಾನೋತ್ಸವದ ಅಂಗವಾಗಿ ವಿವಿಧ ಸರ್ಕಾರಿ ಹುದ್ದೆಗೆ ನೇಮಕರಾದವರಿಗೆ ಪ್ರಮಾಣ ಪತ್ರ ನೀಡುವುದು ಸೇರಿ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕುರಿತು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ನೇತೃತ್ವದಲ್ಲಿ ಜೂ.10ರಂದು ಸಂಜೆ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಅಧಿಕಾರಿಗಳಿಗೆ ಸಿದ್ಧತೆ ಬಗ್ಗೆ ಸಲಹೆ ನೀಡಿದರು.
ಜೂ.23ರಂದು ರಾಯಚೂರು ಗ್ರಾಮಾಂತರ ಕ್ಷೇತ್ರದ ಯರಗೇರಾ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಹತ್ತಿರ ಬುಡಕಟ್ಟು ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 371(ಜೆ) ದಶಮಾನೋತ್ಸವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 371(ಜೆ) ಪ್ರಮಾಣ ಪತ್ರದ ಮೂಲಕ ವಿವಿಧ ಉನ್ನತ ಹುದ್ದೆಗಳಿಗೆ ನೇಮಕಾತಿಯಾದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಯಚೂರು ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿಯವರ ಕಂಚಿನ ಪುತ್ಥಳಿ ಹಾಗೂ ಲೋಗೋ ಅನಾವರಣ ನಡೆಯಲಿದೆ ಎಂದು ಶಾಸಕ ಬಸನಗೌಡ ದದ್ದಲ್ ಅವರು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ನಿತೀಶ್ ಕೆ.ಅವರು ಮಾತನಾಡಿ, ಜಿಲ್ಲೆಯ ಯರಗೇರ ಗ್ರಾಮದಲ್ಲಿ ಬುಡಕಟ್ಟು ಉತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಸ್ವಾಗತ ಸಮಿತಿ, ಸ್ಥಳ, ವೇದಿಕೆ ವ್ಯವಸ್ಥೆ ಸಮಿತಿ, ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ಸಮಿತಿ, ಆಹಾರ ಕುಡಿಯುವ ನೀರು ಮತ್ತು ವಿಶ್ರಾಂತಿ ವ್ಯವಸ್ಥೆ ಸಮಿತಿ, ಪತ್ರಿಕಾ ಮತ್ತು ಮಾಧ್ಯಮ ನಿರ್ವಹಣಾ ಸಮಿತಿ, ವೈದ್ಯಕೀಯ ಮತ್ತು ತುರ್ತು ಸೇವಾ ಸಮಿತಿಗಳನ್ನು ರಚನೆ ಮಾಡಲಾಗಿದೆ. ಎಲ್ಲಾ ಸಮಿತಿಯ ಅಧಿಕಾರಿಗಳು ತಮ್ಮ- ತಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡದರು.
ಅಂದು ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ಹಾಗೂ ಯೋಜನೆಗಳ ಕುರಿತಂತೆ ಸ್ಟಾಲ್ ಹಾಕುವ ವ್ಯವಸ್ಥೆ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಸಂಬಂಧಿಸಿದ ಅಧಿಕಾರಿಗಳು ಇಲಾಖಾವಾರು ಮಾಹಿತಿಯನ್ನು ನೀಡಬೇಕು. 371(ಜೆ) ಸೌಲಭ್ಯದಿಂದ ವಿವಿಧ ಉನ್ನತ ಹುದ್ದೆಗಳಿಗೆ ನೇಮಕಾತಿಯಾದವರ ಬಗ್ಗೆ ರಾಯಚೂರು ತಹಶೀಲ್ದಾರರು ಹಾಗೂ ಡಿಡಿಪಿಐ ಅವರು ಅಂಕಿಸಂಖ್ಯೆಗಳನ್ನು ಸಂಗ್ರಹಿಸಿಬೇಕು ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲ ಸಚಿವರಾದ ಡಾ.ಕೆ.ಆರ್.ದುರುಗೇಶ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ, ಪಶು ಸಂಗೋಪಾನ ಇಲಾಖೆ ಉಪ ನಿರ್ದೇಶಕರಾದ ಅಶೋಕ ಕೋಲ್ಕಾರ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ ಎಮ್.ಎಸ್., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚಿದಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ್, ಗ್ರಂಥಾಲಯ ಇಲಾಖೆ ಅಧಿಕಾರಿ ನಿರ್ಮಲ, ಕಾರ್ಮಿಕ ಇಲಾಖೆ ಅಧಿಕಾರಿ ಆರತಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.







