ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಸಮುದಾಯದ ಮುಖಂಡರು ಜವಾಬ್ದಾರಿ ಹೊರಬೇಕು: ಯು.ನಿಸಾರ್ ಅಹ್ಮದ್

ರಾಯಚೂರು: ರಾಜ್ಯದಲ್ಲಿ ಅಲ್ಪಸಂಖ್ಯಾತರ ಮುಸ್ಲಿಮರ ಮಕ್ಕಳ ಶೈಕ್ಷಣಿಕ ಮಟ್ಟ ತೀರ ಕಡಿಮೆಯಿದ್ದು, ಉನ್ನತ ಮಟ್ಟದ ಶಿಕ್ಷಣ ನೀಡಲು ಸರ್ಕಾರದ ಜೊತೆಗೆ ಸಮುದಾಯದ ಮುಖಂಡರು ಸಮೀಕ್ಷೆ ಮಾಡಿ ಎಚ್ಚೆತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿ ಹೊರಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಮುಖಂಡರ ಜೊತೆ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 44 ರಷ್ಟು ಅಲ್ಪಸಂಖ್ಯಾತರ ಮಕ್ಕಳು ಅಕ್ಷರದ ಜ್ಞಾನವಿಲ್ಲದವರು ಇದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತರಲ್ಲಿ ಜೈನ್ ಹೆಚ್ಚು ಶಿಕ್ಷಕರು, ಆನಂತರ ಕ್ರಿಶ್ಚಿಯನ್, ಕಡಿಮೆ ಜನಸಂಖ್ಯೆ ಇರುವ ಪಾರ್ಸಿ ಸಮುದಾಯದವರು ಹೆಚ್ಚು ಸುಶಿಕ್ಷಿತರಾಗಿದ್ದಾರೆ. ಮುಸ್ಲಿಮರು ಹೆಚ್ಚು ಅಶಿಕ್ಷಿತರು ಇದ್ದಾರೆ. ಶೇ 50 ರಷ್ಟು ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಶೇ 10 ರಷ್ಟು ಮಾತ್ರ ಎಸೆಸೆಲ್ಸಿ ಓದುತ್ತಿದ್ದಾರೆ. ಶೇ.2.7 ಮಾತ್ರ ಗ್ರ್ಯಾಚ್ಯುಯೆಟ್ ಇದ್ದಾರೆ. ಹೀಗಿದ್ದರೆ ಐಎಎಸ್, ಐಪಿಎಸ್, ವಿಜ್ಞಾನಿಗಳಾಗಬೇಕೆಂದರೆ ಹೆಚ್ಚಿನ ಸಂಖ್ಯೆ ಯಾವಾಗ ಹೆಚ್ಚಾಗುತ್ತದೆ. ಮುಸ್ಲಿಮರು ತಮ್ಮ ತಮ್ಮ ಬಡಾವಣೆಯ ಹಂತದಲ್ಲಿ ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಲು ಸಮೀಕ್ಷೆ ಮಾಡಬೇಕು. ಸಮುದಾಯದ ಶಿಕ್ಷಣ ಸುಧಾರಣೆಗೆ ಮುಂದಾಗಬೇಕು ಎಂದು ಕಿವು ಮಾತು ಹೇಳಿದರು.
ಪ್ರತಿ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದು ಸರ್ಕಾರ ಕೋಟ್ಯಾಂತರ ರೂ. ಅನುದಾನ ನೀಡಲಾಗುತ್ತಿದೆ. ಯಾವುದೇ ಒಬ್ಬ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಬಡವರಿದ್ದರೆ ಸರ್ಕಾರಿ ಶಾಲೆಗೆ ಸೇರಿಸಿ. ಅಂಗನವಾಡಿಯಿಂದ ಉನ್ನತ ಶಿಕ್ಷಣದ ವರೆಗೆ ಉಚಿತ ಶಿಕ್ಷಣ ನೀಡುತ್ತಿದೆ ಇದರ ಸದುಪಯೋಗ ಪಡೆದಯಕೊಳ್ಳಬೇಕು. ಸರ್ಕಾರದ ಸೌಲಭ್ಯ ಸಮುದಾಯದವರು ಹೆಚ್ಚು ಬಳಸಿಕೊಳ್ಳುತ್ತಿಲ್ಲ ಎನ್ನುವುದು ಕಳವಳಕಾರಿ ಸಂಗತಿ ಎಂದರು.
ಕಲ್ಯಾಣ ಕರ್ನಾಟಕ ಎಸೆಸೆಲ್ಸಿಯ ಫಲಿತಾಂಶ ಕಳಪೆಯಾಗಿದೆ. ಉರ್ದು ಮಧ್ಯಮ 17 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಸಾಧನೆ ಮಾಡಿದ್ದು, ಬೀದರ್ ನ 7 ಶಾಲೆ, ಯಾದಗಿರಿ ಹಾಗೂ ರಾಯಚೂರಿನ ಅನೇಕ ಶಾಲೆಗಳು ಸೇರಿವೆ. ಸಮುದಾಯದವರು ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣವೂ ನೀಡಬೇಕು. ಕರಾವಳಿ ಪ್ರದೇಶದಲ್ಲಿ ಮುಸ್ಲಿಮರು ಕನ್ನಡ ಮಾತನಾಡುತ್ತಾರೆ. ಉರ್ದು ವ್ಯಾಮೋಹವಿಲ್ಲ. ಸ್ಥಳೀಯ ಭಾಷೆಗಳ ಮೇಲೆ ಅಭಿಮಾನವಿರಲಿ, ಕೇರಳ, ತಮಿಳುನಾಡು ರಾಜ್ಯಗಳಲ್ಲೂ ಉರ್ದು ಬಾರದಿದ್ದರೂ, ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗಳಲ್ಲಿ ಇದ್ದಾರೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಧಿಕಾರಿ ಮುಜಿಬುಲ್ಲಾ ಜಫಾರಿ, ಎಸ್ಪಿ ಅಬ್ದುಲ್ ಖಾದರ್ ಸೇರಿದಂತೆ ಸಮುದಾಯದ ಮುಖಂಡರು, ಧರ್ಮಗುರುಗಳು ಉಪಸ್ಥಿತರಿದ್ದರು.







