ಕೆಆರ್‌ಐಡಿಎಲ್ ಇಂಜಿನಿಯರ್‌ಗೆ ನಿಂದನೆ ಆರೋಪ : ಸಚಿವ ಎನ್ ಎಸ್ ಬೋಸರಾಜು ವಿರುದ್ಧ ರಾಜ್ಯಪಾಲರಿಗೆ ದೂರು

ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಇತ್ತೀಚೆಗೆ ರಸ್ತೆ ಕಾಮಗಾರಿ ವಿಳಂಬ ಮಾಡಿದ್ದಕ್ಕಾಗಿ ಕೆಆರ್‌ಐಡಿಎಲ್ ಇಂಜಿನಿಯರ್ ಗೆ ಸಚಿವ ಎನ್ ಎಸ್ ಬೋಸರಾಜು ಸಾರ್ವಜನಿಕವಾಗಿ ನಿಂದಿಸಿ ತರಾಟೆಗೆ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎನ್.ಎಸ್.ಬೋಸರಾಜ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಎಂಬವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಒಂದು ಕೋಟಿ ವೆಚ್ಚದ ರಸ್ತೆ ಕಾಮಗಾರಿಯ ಕುರಿತಂತೆ ಸಿರವಾರದಲ್ಲಿ ಕೆಆರ್‌ಐಡಿಎಲ್ ಇಂಜಿನಿಯರ್ ಹನುಮಂತ ರಾಯ್ ಎಂಬವರಿಗೆ ಸಾರ್ವಜನಿಕವಾಗಿ ಕಟ್ಟಿ ಹಾಕಿ ಒದೆಯುವುದಾಗಿ ಬೆದರಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲಸ ವಿಳಂಬವಾಗಿರುವ ಮಾಹಿತಿ ಪಡೆಯುವುದು, ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದು ಸಚಿವರ ಜವಬ್ದಾರಿಯಾಗಿದೆ. ಆದರೆ ಸಾರ್ವಜನಿಕರ ಸಮ್ಮುಖದಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿ ಅವಾಚ್ಯವಾಗಿ ನಿಂದಿಸಿರುವುದು ಅಧಿಕಾರದ ದುರುಪಯೋಗ. ಸಂವಿಧಾನದ 14, 21, 311 ಹಾಗೂ ಬಿಎನ್‌ಎಸ್ ಸೆಕ್ಷನ್ 351-352 ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಸಚಿವ ಸ್ಥಾನದಲ್ಲಿರುವವರು ಜನರ ಮಧ್ಯೆ ಅಧಿಕಾರಿಗಳಿಗೆ ಬೆದರಿಸಿ ಭಯ ಉಂಟು ಮಾಡುವುದು ಅಪರಾಧವಾಗಿದ್ದು ಕೂಡಲೇ ಕ್ರಮಕ್ಕೆ ಸೂಚಿಸಬೇಕೆಂದು ದೂರಿನಲ್ಲಿ ದಿನೇಶ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.





