ಕಾಂಗ್ರೆಸ್ ಸರಕಾರ ದಿವಾಳಿಯಾಗಿದೆ, ಗ್ಯಾರಂಟಿಯಿಂದ ಸಮಗ್ರ ಅಭಿವೃದ್ಧಿ ಅಸಾಧ್ಯ: ಮಾಜಿ ಪ್ರಧಾನಿ ದೇವೇಗೌಡ

ರಾಯಚೂರು: ಕಾಂಗ್ರೆಸ್ ಸರಕಾರ ದಿವಾಳಿಯಾಗಿದೆ. ಸಿಬ್ಬಂದಿಗೆ ವೇತನ ನೀಡಲು ಹಣವಿಲ್ಲ, ಕೇವಲ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಅಸಾಧ್ಯ, ನಾವು ಎಲ್ಲಾ ಸಮಾಜದವರನ್ನು ಒಗ್ಗಟ್ಟಿನಿಂದ ಕೊಂಡೊಯ್ದು ಕೆಲಸ ಮಾಡಿದ್ದೆವು. ಜಾತಿ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು.
ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಆಯೋಜಿಸಿದ್ದ ‘ಜನರೊಂದಿಗೆ ಜನತಾದಳ ಹಾಗೂ ಮಾಜಿ ಪ್ರಧಾನಿಗಳ ಅಭಿನಂದನಾ ಸಮಾರಂಭʼಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಪಕ್ಷದಿಂದ ಬೆಳೆದ ಕೆಲವರು ನಮ್ಮನ್ನು ಹೀಯಾಳಿಸುತ್ತಿದ್ದಾರೆ. ಅಧಿಕಾರವಿದೆ ಎಂದು ಹೇಳುವ ಅವರು ದೇಶದ ಮೂರು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದ್ದಾರೆ. ಅಲ್ಲದೇ ಈಗ ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿದೆ. ನಾವು ಅಧಿಕಾರದಲ್ಲಿ ಇಲ್ಲದಿದ್ದರೂ ಜನರು ನಮ್ಮನ್ನು ಪ್ರೀತಿಸುತ್ತಾರೆ. ದೇವದುರ್ಗದ ಚಿಕ್ಕ ಹಳ್ಳಿಯಲ್ಲಿ ನನ್ನ (ದೇವೇಗೌಡರ) ಪುತ್ಥಳಿ ನಿರ್ಮಾಣ ಮಾಡಿದ್ದೇ ಇದಕ್ಕೆ ಸಾಕ್ಷಿ. ನಾನು ಇದನ್ನು ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ, ಇಂದಿಗೂ ಜನ ನಮ್ಮನ್ನು ನಂಬಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ನನಗೀಗ 93 ವರ್ಷ. ಇನ್ನೂ ಎಷ್ಟು ಕಾಲ ನಾನು ಬದುಕಿರುತ್ತೇನೆ ನನಗೆ ಗೊತ್ತಿಲ್ಲ. ಆದರೂ ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ನಾನು ಇದ್ದಷ್ಡು ದಿನ ಪಕ್ಷಕ್ಕಾಗಿ ದುಡಿಯುತ್ತೇನೆ, ರಾಜ್ಯದ ಬದಲಾವಣೆಗೆ ಯುವಕರು ಕೈಜೋಡಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಹನುಮಂತಪ್ಪ ಆಲ್ಕೋಡ್ ಮಾತನಾಡಿದರು.
ಮಾಜಿ ಶಾಸಕರಾದ ಬಂಡೇಪ್ಪ ಕಾಶಂಪೂರು, ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೀರುಪಾಕ್ಷಿ, ಮಹಾಂತೇಶ ಪಾಟೀಲ್ ಅತ್ತನೂರು, ತಾಲೂಕ ಜೆಡಿಎಸ್ ಅಧ್ಯಕ್ಷ ಬುಡನಗೌಡ ಪಾಟೀಲ್, ಮುಖಂಡರಾದ ಸಿದ್ದನತಾತ ಮುಂಡರಗಿ, ಸಿದ್ದನಗೌಡ ಮೂಡಲಗುಂಡ, ನಾಗರಾಜ ಪಾಟೀಲ್ ನೀಲಗಲ್ ಸೇರಿದಂತೆ ಇತರರು ಇದ್ದರು.







