MGNREG ಹೆಸರು ಬದಲಾವಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ರಾಯಚೂರು: ಯುಪಿಎ ಸರಕಾರ ಜಾರಿಗೊಳಿಸಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಬದಲಾಯಿಸಿ ಗಾಂಧೀಜಿ ಅವರ ಹೆಸರು ತೆಗೆದು ಹಾಕಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾನಿರತರು ಮಹಾತ್ಮ ಗಾಂಧೀಜಿ ಅವರ ಪೋಸ್ಟರ್‌ಗಳನ್ನು ಹಿಡಿದು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೇಣ್ಣೆ ಮಾತನಾಡಿ, ಬಡವರ ಬದುಕಿಗೆ ಆಸರೆಯಾಗಿರುವ ನರೇಗಾ ಯೋಜನೆಯ ಹೆಸರನ್ನು ಬದಲಿಸಿ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)" (VB-G RAM G) ಎಂದು ಮಾಡಿರುವುದು ಖಂಡನೀಯ. ಭಾರತ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಮಹಾತ್ಮಾ ಗಾಂಧಿ ಅವರು ಏನು ಎನ್ನುವುದು ಗೊತ್ತಿದೆ. ಬಿಜೆಪಿ ಸರಕಾರ ಆರ್ ಎಸ್ಎಸ್ ನಾಯಕರನ್ನು ಮೆಚ್ಚಿಸಲು ಮಹಾತ್ಮಾ ಗಾಂಧಿ ಅವರ ಹೆಸರು ತೆಗೆದುಹಾಕಿದೆ ಎಂದು ದೂರಿದರು. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಮುಂದುವರಿಸದಿದ್ದರೆ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನರೇಗಾ ಯೋಜನೆ ಬಡವರ ಪರವಾದ ಉದ್ಯೋಗ ಖಾತ್ರಿ ಯೋಜನೆ. ಅದರ ಹೆಸರನ್ನು ಬದಲಿಸುವ ಅಗತ್ಯವೇನು? ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕುವ ಮೂಲಕ ಬಿಜೆಪಿ ಸರಕಾರ ದೇಶದ ಮಹಾನ್ ನಾಯಕನಿಗೆ ಅಪಮಾನ ಮಾಡುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಆರತಿ ಚಂದ್ರಶೇಖರ, ಸುರೇಖಾ, ಕವಿತಾ, ಪ್ರತಿಭಾ ರೆಡ್ಡಿ ವಂದಾನ, ರೇಹಾನ ಬೇಗಂ, ಹರಿವಿನ್ ಬೇಗಂ, ಪಿ ಮಾದೇವಿ, ಲಕ್ಷ್ಮಿ ನರಸಿಂಹಲು, ಬಿ.ಉಮಾ ಜ್ಯೋತಿ, ಅಮಿತಾ ಬೇಗಂ, ನಿರ್ಮಲಾ ಭಂಡಾರಿ, ಸುರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







