ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತ : ವೀಡಿಯೋ ವೈರಲ್

ರಾಯಚೂರು : ಕಾರ್ಯಕರ್ತರಿಗೆ ಮಾಹಿತಿಯನ್ನು ನೀಡದೇ ತಾಲೂಕಿಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ಕಾಂಗ್ರೆಸ್ ಕಾರ್ಯಕರ್ತನೊಬ್ಬ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಲಿಂಗಸುಗೂರು ಪ್ರವಾಸಿಮಂದಿರಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದ್ದು, ಕಾರ್ಯಕರ್ತ ಹಾಗೂ ಸಚಿವರ ನಡುವಿನ ವಾಗ್ವಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಲಿಂಗಸುಗೂರು ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಎದ್ದು ಬರುವಾಗ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬೆಂಬಲಿಗ ಗದ್ದೆನಗೌಡ ಏರಿದ ದನಿಯಲ್ಲಿ ಪ್ರಶ್ನಿಸಿದ್ದಾರೆ.
ಪೂರ್ವ ಮಾಹಿತಿ ಇಲ್ಲದೇ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೂ ತಾರದೇ ಏಕಾಏಕಿ ತಾಲೂಕಿಗೆ ಬಂದರೆ ಹೇಗೆ ಎಂದು ಕಾರ್ಯಕರ್ತ ಪ್ರಶ್ನಿಸಿದ್ದಾರೆ. ಗಲಿಬಿಲಿಗೊಂಡ ಸಚಿವರು, ನಿಮಗೆ ಏಕೆ ಹೇಳಬೇಕು ? ನಾನ್ಸ್‌ನ್ಸ್ ತರ ಮಾತನಾಡಬೇಡ ಎಂದು ಗದರಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಗದ್ದೆನಗೌಡ, ತಾನು ನಿಷ್ಠಾವಂತ ಕಾರ್ಯಕರ್ತ. ಸ್ಥಳೀಯರಿಗೆ ನೀವು ಬರುವ ಮಾಹಿತಿ ಇಲ್ಲದಿದ್ದರೆ ಹೇಗೆ ಎಂದು ಮರಿ ಉತ್ತರ ನೀಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೇರುವುದನ್ನು ಅರಿತ ಸ್ಥಳದಲ್ಲಿದ್ದ ಮುಖಂಡರು, ಕಾರ್ಯಕರ್ತರು ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎನ್ನುವ ಮೂಲಕ ಗದ್ದೆನಗೌಡ ಅವರಿಗೆ ಬುದ್ಧಿವಾದ ಹೇಳಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಬಿಜೆಪಿಯಂತೆ ನಮ್ಮಲ್ಲಿ ಸರ್ವಾಧಿಕಾರವಿಲ್ಲ :
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಕಲಬುರಗಿಯಿಂದ ಮಸ್ಕಿ ಬಳಿಯ ಉಟಕನೂರಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದಾಗ ಲಿಂಗಸುಗೂರಿನ ಪ್ರವಾಸಿಮಂದಿರಕ್ಕೆ ಫ್ರೆಶ್ ಅಪ್ ಆಗಲು ಹೋಗಿದ್ದೆ. ಆದರೆ, ಕಾರ್ಯಕ್ರಮವೊಂದಕ್ಕೆ ಬಂದಿರುವುದಾಗಿ ತಪ್ಪು ತಿಳಿದ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದಾರೆ. ತಮಗೆ ಮಾಹಿತಿ ನೀಡದಿದ್ದರೆ ಹೇಗೆ ಎಂದಿದ್ದಾರೆ. ಪಕ್ಷದ ನಾಯಕರಲ್ಲಿ ಯಾವುದೇ ರೀತಿಯ ಒಡಕಿಲ್ಲ, ಭಿನ್ನಾಭಿಪ್ರಾಯವಿಲ್ಲ ಹಾಗೂ ಯಾವುದೇ ಬಣಗಳಿಲ್ಲ. ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರ ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸುವ ನಾಯಕರನ್ನು ಪ್ರಶ್ನಿಸುವ ಹಕ್ಕು ನೀಡಿದೆ. ಇದು ಪ್ರಜಾಭುತ್ವದ ಸಹಜ ಗುಣ, ಬಿಜೆಪಿ ಪಕ್ಷದಲ್ಲಿರುವಂತೆ ನಾಯಕರನ್ನು ಪ್ರಶ್ನೆ ಮಾಡದ ಹಾಗೆ ಸರ್ವಾಧಿಕಾರ ನಮ್ಮಲ್ಲಿ ಇಲ್ಲ ಎಂದು ಹೇಳಿದರು.







