ರಾಯಚೂರು | ಸರಕಾರಿ ಜಮೀನು ಒತ್ತುವರಿ ಮಾಡಿ ಫಂಕ್ಷನ್ ಹಾಲ್ ನಿರ್ಮಾಣ: ಸಮಾಜ ಸೇವಾ ಸಂಘ ಆರೋಪ

ರಾಯಚೂರು : ನಗರದ ಸರಕಾರಿ ಜಮೀನಿನಲ್ಲಿ ಫಂಕ್ಷನ್ ಹಾಲ್ ನಿರ್ಮಾಣ ಮಾಡಿ ರಾಜಾರೋಷವಾಗಿ ಹಣ ಗಳಿಸುತ್ತಿರುವವರ ವಿರುದ್ಧ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಮಾಜ ಸೇವಾ ಸಂಘದ ಅಧ್ಯಕ್ಷ ಈರೇಶ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈರೇಶ, ರಾಯಚೂರು ನಗರದ ಎಲ್‌ಬಿಎಸ್ ನಗರದ ಚಂದ್ರಬಂಡಾ ರಸ್ತೆಯಲ್ಲಿರುವ ಜಮೀನನ್ನು ಕೆಲ ಪ್ರಭಾವಿಗಳು ಸೇರಿಕೊಂಡು ಒತ್ತುವರಿ ಮಾಡಿ ಅದರಲ್ಲಿ ಫಂಕ್ಷನ್ ಹಾಲ್ ನಿರ್ಮಿಸಿ ಒಂದು ಕಾರ್ಯಕ್ರಮಕ್ಕೆ 35 ರಿಂದ 45 ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ. ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮಗಳು ಬೆಳಿಗ್ಗೆ ಮತ್ತು ರಾತ್ರಿ ಏರ್ಪಡಿಸಿ 70 ರಿಂದ 90 ಸಾವಿರ ರೂ.ಗಳವರೆಗೆ ಹಣ ಗಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸರಕಾರಿ ಜಮೀನು ಬೃಹತ್ ಗುಡ್ಡದ ಕೆಳಗೆ ಇರುವುದರಿಂದ ಮಳೆಗಾಲದಲ್ಲಿ ಗುಡ್ಡ ಕುಸಿದು ಮೇಲಿರುವ ಹೆಬ್ಬಂಡೆಗಳು ಉರುಳಿ ಫಂಕ್ಷನ್ ಹಾಲ್ ಮೇಲೆ ಬಿದ್ದು ಸಾವು-ನೋವುಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಗುಡ್ಡ ಪ್ರದೇಶದ ಸುತ್ತಮುತ್ತ ಸುಮಾರು 20 ಮೀಟರ್ ಸ್ಥಳವನ್ನು ಕಾಯ್ದಿರಿಸಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ. ಆದರೆ ರಾಯಚೂರು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಜಾಣ ಕುರುಡರಂತೆ ಸುಮ್ಮನೆ ಕುಳಿತಿರುವುದು ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಸ್ವರೂಪದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಈರೇಶ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಇಮಾಮ್ ಪಾಷಾ, ಧರಮ್ ಕುಮಾರ, ಹುಸೇನ್ ಬಾಶಾ, ಫಾರೂಕ್, ಯಾಕೂಬ್, ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.







