ರಾಯಚೂರು| 1064 ಎಕರೆ ಭೂಮಿಯನ್ನು ಭೂಹೀನರಿಗೆ ಹಂಚಿಕೆ ಮಾಡುವಂತೆ ಸಿಪಿಐ(ಎಂಎಲ್) ಆಗ್ರಹ

ರಾಯಚೂರು: ಸಿಂಧನೂರು ತಾಲೂಕಿನ ಜವಳಗೇರ ಗ್ರಾಮದಲ್ಲಿ ನಾಡಗೌಡರ ಕುಟುಂಬ ಕಳೆದ 44 ವರ್ಷಗಳಿದ ಅಕ್ರಮವಾಗಿ ವಶಪಡಿಸಿಕೊಂಡಿರುವ ಭೂಮಿಯನ್ನು ಕೂಡಲೇ ಭೂಹೀನರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಾಲಿಟ್ ಬ್ಯುರೋ ಸದಸ್ಯ ಮಾನಸಯ್ಯ ನೇತೃತ್ವದಲ್ಲಿ ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ ಮನವಿ ಸಲ್ಲಿಸಿದರು.
ಭೂ ಸುಧಾರಣೆ ಕಾಯ್ದೆ 74 ಹಾಗೂ 75ರ ಅಡಿಯಲ್ಲಿ ಸಿಂಧನೂರು ತಾಲೂಕಿನ ಸರ್ವೇ ನಂ. 48 ರಲ್ಲಿ 1064 ಎಕರೆ ಭೂಮಿ ಅಕ್ರಮ ವಹಿವಾಟು ಮಾಡಿರುವವರಿಗೆ ನೋಟಿಸ್ ನೀಡಬೇಕು. ಅಲ್ಲದೇ ಲಿಂಗಸುಗೂರು ತಾಲೂಕಿನಲ್ಲಿ 25 - 30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ 998 ಭೂ ಹೀನ ರೈತರಿಗೆ ಅಕ್ರಮ ಸಕ್ರಮ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಿ ಪಟ್ಟಾ ನೀಡಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದಲ್ಲಿ ಸಿಂಧನೂರು ಲಿಂಗಸುಗೂರು ತಾಲೂಕುಗಳಲ್ಲಿ ಏಕ ಕಾಲದಲ್ಲಿ ಹೋರಾಟ ಮಾಡಲಾಗುತ್ತದೆ. ಜನವರಿ ಮೊದಲ ವಾರದಲ್ಲಿ ಅಂಬಾಮಠಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೇರಾವು ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿಗೆ ಸ್ಪಂದಿಸಿದ ಆಯುಕ್ತರು ಬುಧವಾರದೊಳಗೆ 48 ಗ್ರಾಮಗಳ 1064 ಎಕರೆ ಅಕ್ರಮ ವಹಿವಾಟು ಮಾಡಿದವರಿಗೆ ಭೂ ನ್ಯಾಯ ಮಂಡಳಿಯಿಂದ ನೋಟಿಸ್ ಜಾರಿ ಮಾಡಿಸಿ ವಿಚಾರಣೆ ಮಾಡಲಾಗುವುದು. ಲಿಂಗಸುಗೂರು ಅಕ್ರಮ ಸಕ್ರಮ ಭೂಪಟ್ಟಾ ಕುರಿತು ಭೂಮಿ ಸರ್ವೇ ಮಾಡಿ ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ್, ಜಿಲ್ಲಾ ಸಮಿತಿಯ ಹೆಚ್ ಆರ್ ಹೊಸಮನಿ, ಆದೇಶ ಹಿರೇ ನಗನೂರ, ವೀರಭದ್ರಪ್ಪ ತೊರಲಬೆಂಚಿ, ಬಸವರಾಜ ಮುದುಗಲ್, ಹನುಮಂತ ಗೋಡಿಹಾಳ, ಚಿದಾನಂದ, ತಿಪ್ಪಣ್ಣ ಚಿಕ್ಕಹೆಸರೂರ, ಎಂ ನಿಸರ್ಗ ಗುಂಡಪ್ಪ ದೇವರಭೂಪುರ, ತಿಮ್ಮಣ್ಣ ಪೂಜಾರಿ, ಪರಸಪ್ಪ ಸುಣಕಲ್, ಹನುಮಂತ ಪೂಜಾರಿ, ದ್ಯಾಮಣ್ಣ ಸುಣಕಲ್ ಸೇರಿ ಹಲವರು ಉಪಸ್ಥಿತರಿದ್ದರು.







