ತುಂಗಭದ್ರಾ ಹಂಗಾಮಿ ನೌಕರರಿಗೆ 8 ತಿಂಗಳ ಬಾಕಿ ವೇತನ ಪಾವತಿಗೆ ವಿಳಂಬ; ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಎಚ್ಚರಿಕೆ

ರಾಯಚೂರು: ತುಂಗಭದ್ರಾ ನೀರಾವರಿ ವಲಯದ ಹಂಗಾಮಿ ನೌಕರರಿಗೆ ಕಳೆದ ಎಂಟು ತಿಂಗಳಿನಿಂದ ವೇತನ ಪಾವತಿಯಾಗದೆ ಇರುವುದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕೆಲಸವೂ ಇಲ್ಲ, ವೇತನವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಸಮಸ್ಯೆ ಪರಿಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ನಡೆಸುವುದಾಗಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ಎಚ್ಚರಿಕೆ ನೀಡಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ಮಾನಸಯ್ಯ, “ಉಸ್ತುವಾರಿ ಸಚಿವರು ಬಾಕಿ ವೇತನ ಪಾವತಿಸಲು ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ, ನೀರಾವರಿ ನಿಗಮದಲ್ಲಿ ಅದಕ್ಕೆ ಬೆಲೆ ಇಲ್ಲದಂತಾಗಿದೆ. ನಮಗೆ ಉತ್ಸವ ಸಚಿವರು ಬೇಡ, ಸಮಸ್ಯೆ ಪರಿಹರಿಸುವ ಉಸ್ತುವಾರಿ ಸಚಿವರು ಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಂಗಭದ್ರಾ ಯೋಜನೆಯಡಿ ಕ್ರಸ್ಟ್‌ಗೇಟ್ ಅಳವಡಿಕೆಯಿಂದ ನೀರು ಹರಿವು ಸ್ಥಗಿತಗೊಂಡಿದ್ದು, ಇದರಿಂದ ಕಾರ್ಮಿಕರಿಗೆ ಕೆಲಸವೂ ಇಲ್ಲದಂತಾಗಿದೆ. ವರ್ಷಪೂರ್ತಿ ಕೆಲಸ ನೀಡುವುದಾಗಿ ನಿಗಮ ಭರವಸೆ ನೀಡಿದ್ದರೂ, ಪ್ರಸ್ತುತ ಕೆಲಸವೂ ಇಲ್ಲ, ವೇತನವೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಬಾಕಿ ವೇತನವನ್ನು ತಕ್ಷಣ ಪಾವತಿಸದಿದ್ದರೆ ಜನವರಿ 26ರಂದು ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಅವಕಾಶ ನೀಡುವುದಿಲ್ಲ. ಕಪ್ಪುಪಟ್ಟಿ ಪ್ರದರ್ಶಿಸಿ ಹಂಗಾಮಿ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಹೊರಗುತ್ತಿಗೆ, ಗುತ್ತಿಗೆ ನೌಕರರು, ಅತಿಥಿ ಶಿಕ್ಷಕರು ಸೇರಿದಂತೆ ಅನೇಕ ಇಲಾಖೆಗಳಲ್ಲೂ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ. ತುಂಗಭದ್ರಾ ಯೋಜನೆ 6 ಲಕ್ಷ ಎಕರೆ ಕೃಷಿಭೂಮಿಗೆ ನೀರು ಒದಗಿಸುತ್ತಿದ್ದು, ಎರಡು ಮಹಾನಗರ ಪಾಲಿಕೆಗಳು, ಮೂರು ಪಟ್ಟಣ ಪಂಚಾಯತ್‌ಗಳು ಹಾಗೂ 180 ಗ್ರಾಮಗಳ ಕುಡಿಯುವ ನೀರು ಸರಬರಾಜು ಇದರ ಮೇಲೆ ಅವಲಂಬಿತವಾಗಿದೆ. ಇಂತಹ ಮಹತ್ವದ ಯೋಜನೆಯಲ್ಲಿ ಕಾರ್ಮಿಕರನ್ನು ವೇತನವಿಲ್ಲದೇ ಕೆಲಸಕ್ಕೆ ನಿಲ್ಲಿಸಿರುವುದು ಅನ್ಯಾಯಕರ ಎಂದು ಅವರು ಹೇಳಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಅಡವಿರಾವ್ ಸೇರಿದಂತೆ ಲೋಕಪ್ಪ, ರಾಧಾಕೃಷ್ಣ, ಮುದುಕಪ್ಪ, ಸಿದ್ದಪ್ಪ, ಶಂಕರಪ್ಪ, ನಾಗರಾಜ ಹಾಗೂ ಮಹದ ಸಫಿಯುದ್ದೀನ್ ಉಪಸ್ಥಿತರಿದ್ದರು.







