ದೇವದುರ್ಗ | ಕೆಬಿಜೆಎನ್‌ಎಲ್ ಚಿಕ್ಕಹೊನ್ನಕುಣಿ ಕಚೇರಿ ಸ್ಥಳಾಂತರ ಖಂಡಿಸಿ ಸೆ.28ರಂದು ಧರಣಿ ಸತ್ಯಾಗ್ರಹ : ಶಾಸಕಿ ಕರೆಮ್ಮ ಜಿ.ನಾಯಕ

ದೇವದುರ್ಗ: ತಾಲೂಕಿನ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್) ನಾರಾಯಣಪುರ ಬಲದಂಡೆ ಕಾಲುವೆ ವಿಭಾಗ–6ರ ಚಿಕ್ಕಹೊನ್ನಕುಣಿ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಸೆಪ್ಟೆಂಬರ್ 28ರಂದು ಚಿಕ್ಕಹೊನ್ನಕುಣಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗ ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಪ್ರದೇಶಗಳಲ್ಲಿ ಒಂದಾಗಿದ್ದು, ಈ ಭಾಗದ ರೈತರಿಗೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ ನೀರಾವರಿ ಯೋಜನೆಗಳಿಂದ ಮುಳುಗಡೆಯಾದ ಮತ್ತು ತೊಂದರೆಗೊಳಗಾದ ಗ್ರಾಮಗಳ ಜನರಿಗೆ ಪುನರ್ವಸತಿ ಮತ್ತು ಪರಿಹಾರ ಒದಗಿಸುವ ಜವಾಬ್ದಾರಿ ಈ ಕಚೇರಿಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.
ಚಿಕ್ಕಹೊನ್ನಕುಣಿ ಕಚೇರಿಯನ್ನು ರಾಯಚೂರು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವುದರಿಂದ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ರೈತರಿಗೆ ತೀವ್ರ ತೊಂದರೆಯಾಗಲಿದೆ. ದೇವದುರ್ಗದಿಂದ ರಾಯಚೂರಿಗೆ ಸುಮಾರು 60 ಕಿ.ಮೀ., ಯಾದಗಿರಿಯಿಂದ 60 ಕಿ.ಮೀ. ಹಾಗೂ ಕಲಬುರಗಿಯಿಂದ ಸುಮಾರು 115 ಕಿ.ಮೀ. ದೂರ ಪ್ರಯಾಣಿಸಬೇಕಾಗುತ್ತದೆ. ಸಣ್ಣಪುಟ್ಟ ಕೆಲಸಗಳಿಗೂ ರೈತರು ದೂರದೂರಿಗೆ ಅಲೆದಾಡಬೇಕಾಗಿದ್ದು, ಒಂದೇ ದಿನದಲ್ಲಿ ಹೋಗಿ ಬರುವುದು ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾವು ಸಾಮಾನ್ಯ ಮಹಿಳೆಯಾಗಿ ಆಯ್ಕೆಯಾಗಿರುವ ಕಾರಣ ಸರ್ಕಾರ ದೇವದುರ್ಗ ತಾಲೂಕಿನ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಈಗಾಗಲೇ ಎಸ್‌ಎಲ್‌ಓ ಕಚೇರಿ ಹಾಗೂ ಕಾರಾಗೃಹವನ್ನು ಸಹ ರಾಯಚೂರಿಗೆ ಸ್ಥಳಾಂತರಿಸಲಾಗಿದೆ. ತಾಲೂಕಿನ ಅಭಿವೃದ್ಧಿ ಕಾಮಗಾರಿಗಳು, ಅನುದಾನಗಳು ಹಾಗೂ ಯೋಜನೆಗಳ ಅನುಷ್ಠಾನಕ್ಕೂ ಅಡ್ಡಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣವೇ ಕಚೇರಿ ಸ್ಥಳಾಂತರ ಆದೇಶವನ್ನು ಹಿಂಪಡೆದು ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಶಾಸಕಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಸನಗೌಡ ದೇಸಾಯಿ, ಅಮರೇಶ ಪಾಟೀಲ್ ಪರತಪುರ, ಚನ್ನಪ್ಪ, ಹನಮಂತರಾಯ ಚಿಂತಲಕುಂಟ, ಮಹಿಬೂಬಸಾಬ್, ರಮೇಶ್ ರಾಮನಾಳ, ಗೋವಿಂದರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.






