Devadurga | ಕಳಪೆ ಹತ್ತಿ ಬೀಜ ಮಾರಾಟಗಾರರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ

ದೇವದುರ್ಗ: ಮುಂಗಾರು ಬಿತ್ತನೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಗುಣಮಟ್ಟದ ಹತ್ತಿ ಬೀಜಗಳನ್ನು ಒದಗಿಸಬೇಕು ಹಾಗೂ ಕಳಪೆ ಮಟ್ಟದ ಬೀಜಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದೇವದುರ್ಗ ಘಟಕ ಆಗ್ರಹಿಸಿದೆ.
ರಾಜ್ಯ ಸಂಚಾಲಕರಾದ ಉಮಾದೇವಿ ನಾಯಕ ಹಾಗೂ ರಾಯಚೂರು ಜಿಲ್ಲಾ ಅಧ್ಯಕ್ಷರ ಒಪ್ಪಿಗೆಯಲ್ಲಿ ದೇವದುರ್ಗ ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಜಿಲ್ಲಾಡಳಿತದ ಗಮನಕ್ಕೆ ಈ ವಿಷಯವನ್ನು ತಂದರು.
ದೇವದುರ್ಗ ತಾಲೂಕಿನಲ್ಲಿ ಕಳಪೆ ಗುಣಮಟ್ಟದ ಹತ್ತಿ ಬೀಜಗಳು ಮಾರಾಟವಾಗುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿಬರುತ್ತಿದ್ದು, ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಹತ್ತಿ ಬೀಜಗಳನ್ನು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ರೀತಿಯ ರಸಗೊಬ್ಬರ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಸಗೊಬ್ಬರ ಅಂಗಡಿ ಮಾಲೀಕರು ಕೃತಕ ಕೊರತೆ ಸೃಷ್ಟಿಸದಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಜಿಲ್ಲಾ ಉಪ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಘಟಕ ಜಿಲ್ಲಾ ಅಧ್ಯಕ್ಷ ಮಲ್ಲೇಶ್ ನಾಯಕ್, ದೇವದುರ್ಗ ತಾಲೂಕು ಉಪಾಧ್ಯಕ್ಷ ನಾಗರಾಜ್ ನಾಯಕ್ ತ್ಯಾಗ್ಗಿಹಾಳ್, ಪ್ರಧಾನ ಕಾರ್ಯದರ್ಶಿ ರಮೇಶ್ ನಾಯಕ್ ಸಿಪಾತಗೇರಾ, ರೈತ ಮುಖಂಡರಾದ ಬಸನಗೌಡ ಅರಶಿಣಗಿ, ಬಾವಸಾಬ್ ಪಾರ್ಥಪೂರ, ಪರಮೇಶ ಹುನೂರ್, ಕರಿಯಪ್ಪ ಅರಶಿಣಿಗಿ, ವೆಂಕುಬ, ರಾಜಾಸಾಬ್ ಅರಶಿಣಿಗಿ, ಚಂದಸಾಬ್, ರೈಹಿಮಾನ ಸಾಬ್, ರಾಮಲಿಂಗ ಅರಶಿಣಿಗಿ, ದೇವಣ್ಣ, ಬಾಲೆಸಾಬ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.






