ದೇವದುರ್ಗ | ಗಬ್ಬೂರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಬೂದಿಬಸವೇಶ್ವರ ಮಹಾ ರಥೋತ್ಸವ

ದೇವದುರ್ಗ : ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಬೂದಿಬಸವೇಶ್ವರ ಮಹಾ ರಥೋತ್ಸವ ಗುರುವಾರ ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನೆರವೇರಿತು. ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಸಂಭ್ರಮಿಸಿದರು.
ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು ಮಠದ ಕರ್ತೃ ಗದ್ದುಗೆಯಿಂದ ಹೊರಟು ಗ್ರಾಮದೊಳಗಿನ ಮಠವನ್ನು ತಲುಪಿದರು. ನಂತರ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ, ಸಕಲ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ರಥಕ್ಕೆ ಎಣ್ಣೆ ಸವರಿ ಹರಕೆ ತೀರಿಸುವುದು ಸಂಪ್ರದಾಯವಾಗಿದ್ದು, ಭಕ್ತರು ಬೆಳಗ್ಗೆಯಿಂದಲೇ ಹರಕೆ ತೀರಿಸಲು ಮುಗಿಬಿದ್ದರು. ಆರು ಚಕ್ರಗಳ ಬೃಹತ್ ರಥವನ್ನು ಮಠದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದ ಪಾದಗಟ್ಟೆವರೆಗೆ ಭಕ್ತರು ಎಳೆದು ಕೊಂಡೊಯ್ದರು. ರಥದ ಮೇಲೆ ಹಣ್ಣು, ಬರ್ಫಿ ತೂರಿ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು.
ರಥೋತ್ಸವದಲ್ಲಿ ರಾಯಚೂರಿನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ರಾಚೋಟಿ ವೀರ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಸುಲ್ತಾನಪುರ ಪಂಚಾಕ್ಷರಿ ಮಠದ ಶಂಭು ಸೋಮೇಶ್ವರ ಸ್ವಾಮೀಜಿ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಗ್ರಾಮದ ಹಿರಿಯ ಮುಖಂಡರಾದ ಸಾಲಿ ಬೂದಯ್ಯ ಸ್ವಾಮಿ, ಸಾಲಿ ದೊಡ್ಡಬಸಯ್ಯ ಸ್ವಾಮಿ, ಸಾಲಿ ಶರಣಯ್ಯ ಸ್ವಾಮಿ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಈ ವೇಳೆ ಮಠಾಧೀಶ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.







