ದೇವದುರ್ಗ | ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಾಮಾಣಿಕ ಸೇವೆ ಮಾಡುವೆ : ಶಾಸಕಿ ಕರೆಮ್ಮ ಜಿ.ನಾಯಕ್

ದೇವದುರ್ಗ: ಮಕ್ಕಳ ಭವಿಷ್ಯ ರೂಪಿಸಲು ಹಗಲಿರುಳು ಶ್ರಮಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ನಾನು ಸದಾ ನಿಮ್ಮೊಡನೆ ಸಹೋದರಿಯಂತೆ ನಿಂತು, ಶಿಕ್ಷಕರ ಕಷ್ಟ-ಸುಖಗಳಿಗೆ ಬೆನ್ನೆಲುಬಾಗಿ ಬೆಂಬಲ ನೀಡಲಿದ್ದೇನೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ್ ಭರವಸೆ ನೀಡಿದರು.
ಪಟ್ಟಣದ ಶ್ರೀಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 'ತಾಲೂಕು ಗುರು ನಮನ' ಹಾಗೂ 'ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ' ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ವೈಯಕ್ತಿಕ ಜೀವನದ ಹಾದಿಯನ್ನು ಮೆಲುಕು ಹಾಕಿದ ಶಾಸಕರು, ನನಗೆ ನಿಜವಾಗಿಯೂ ಶಾಸಕಿಗಿಂತಲೂ ಶಿಕ್ಷಕಿಯಾಗುವ ದೊಡ್ಡ ಆಸೆ ಇತ್ತು. ಆದರೆ, ಬಾಲ್ಯದಲ್ಲೇ ವಿವಾಹವಾದ ಕಾರಣ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಇಂದು ರಾಜಕೀಯವಾಗಿ ಜನಸೇವೆ ಮಾಡುವ ಅವಕಾಶ ಸಿಕ್ಕಿದೆ. ತಾಲೂಕಿನ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು.
ಅಲ್ಲದೆ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮಾತನಾಡಿ, ಸಾರ್ವಜನಿಕರು ಸಮುದಾಯ ಭವನ, ಗುಡಿ-ಗುಂಡಾರಗಳಿಗೆ ಅನುದಾನ ಕೇಳುವ ಬದಲು, ಶಾಲೆಗಳಿಗೆ ಮೂಲಸೌಲಭ್ಯ ಹಾಗೂ ಶಿಕ್ಷಕರನ್ನು ಕೇಳಿದ್ದರೆ ಇಂದು ಕಲ್ಯಾಣ ಕರ್ನಾಟಕ ಶಿಕ್ಷಣದಲ್ಲಿ ಹಿಂದುಳಿಯುತ್ತಿರಲಿಲ್ಲ. ಸರ್ಕಾರವು ಬಡ ಮಕ್ಕಳಿಗೆ 'ವಿದ್ಯಾ ಕಿಟ್' ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಬಡ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಮಾತ್ರ ಶಿಕ್ಷಕರಿಗೆ ನೀಡುವ ಪ್ರಶಸ್ತಿಗೆ ನೈಜ ಬೆಲೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಪ್ರಮುಖರಾದ ಬಸನಗೌಡ ದೇಸಾಯಿ, ಆದನಗೌಡ ಬುಂಕಲದೊಡ್ಡಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.







