ದೇವದುರ್ಗ | ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ: ಮೂರು ಗಂಟೆ ರಸ್ತೆ ತಡೆ

ದೇವದುರ್ಗ: ಭತ್ತ ಹಾಗೂ ಮೆಣಸಿನಕಾಯಿ ಬೆಳೆಗಳನ್ನು ಉಳಿಸಲು ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡು ರಸ್ತೆ ತಡೆ ನಡೆಸಿದರು.
ಸೋಮವಾರ ಶಾಸಕರ ಕಾರ್ಯಾಲಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗವಾಗಿ ಸಿರವಾರ ಕ್ರಾಸ್‌ವರೆಗೆ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಕರೆಮ್ಮ ಜಿ. ನಾಯಕ, ಸರ್ಕಾರ ರೈತರಿಗೆ ವಿಷವುಣಿಸಿ ಬೇರೆ ರಾಜ್ಯಗಳಿಗೆ ನೀರು ಹರಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ 2028ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಸರ್ಕಾರ ಅಧಿಕಾರವನ್ನು ಅಧಿಕಾರಿಗಳ ಕೈಗೂ ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ನೀರು ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದ ಅವರು, ಸರ್ಕಾರ ರೈತರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಆರೋಪಿಸಿದರು. ತಮ್ಮ ಕ್ಷೇತ್ರದ ರೈತರು ಸಂಕಷ್ಟದಲ್ಲಿರುವುದನ್ನು ನೋಡಲಾಗದೆ, ಶಾಸಕಿಯಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ದೇವದುರ್ಗದ ಜನರ ಹಿತ ಕಾಪಾಡಲು ತಾವು ಸದಾ ಸಿದ್ಧ ಎಂದು ತಿಳಿಸಿದರು.
ಉಚಿತ ಯೋಜನೆಗಳ ನೆಪದಲ್ಲಿ ಸರ್ಕಾರ ಬೇರೆ ಮಾರ್ಗಗಳ ಮೂಲಕ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೇರುತ್ತಿದೆ. ಇದರಿಂದ ರಾಜ್ಯದ ಜನರು ತತ್ತರಿಸಿದ್ದು, ಸರ್ಕಾರದ ನೀತಿಯಿಂದ ರೈತರು ಆತಂಕದಲ್ಲಿದ್ದಾರೆ. ತಕ್ಷಣವೇ ಜನವರಿವರೆಗೆ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ನೀರಾವರಿ ವ್ಯವಸ್ಥೆ ಜಾರಿಯಾಗಿ 15ರಿಂದ 20 ವರ್ಷಗಳು ಕಳೆದಿದ್ದರೂ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳನ್ನು ಕೈಗೆಟುಕಿಸಿಕೊಳ್ಳಲಾಗದ ಸ್ಥಿತಿ ನಮ್ಮ ಭಾಗದ ರೈತರದ್ದಾಗಿದೆ. ನೀರಿಲ್ಲದೆ ರೈತರು ನೆಮ್ಮದಿಯಿಂದ ಬದುಕಲು ಈ ಸರ್ಕಾರ ಬಿಡುತ್ತಿಲ್ಲ. ಕೂಡಲೇ ಹಂತ ಹಂತವಾಗಿ ನೀರು ಹರಿಸದಿದ್ದರೆ ವಿಧಾನಸೌಧದ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ, ರಾಜ್ಯ ಮುಖಂಡ ಮಹಾಂತೇಶ ಪಾಟೀಲ್, ಶಿವಶಂಕರ್ ವಕೀಲರು, ಬಸಗೌಡ ದೇಸಾಯಿ, ಸಿದ್ದಣ್ಣ ಗಣೆಕಲ್, ಮಹಿಬೂವ ಹೆಗ್ಗಡದಿನ್ನಿ, ಅಮರೇಶ ಪಾಟೀಲ್ ಪರತಪುರ, ಶಿಖರೇಶ ಪಾಟೀಲ್, ನಾಗರಾಜ್ ಪಾಟೀಲ್ ಗೌರಂಪೇಟೆ, ಶರಬಣ್ಣ ಸಾಹುಕಾರ, ತಬಸ್ಸುಮ್ ಉದ್ದಾರ್, ರೇಣುಕಾಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮೂರು ಗಂಟೆ ರಸ್ತೆ ತಡೆ: ಸಂಚಾರ ಅಸ್ತವ್ಯಸ್ತ
ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ರಸ್ತೆ ತಡೆಯನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರಿಂದ ಸಾರ್ವಜನಿಕರು ಹಾಗೂ ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದವರು ತೀವ್ರ ತೊಂದರೆ ಅನುಭವಿಸಿದರು. ರಸ್ತೆ ತಡೆ ಸಂದರ್ಭದಲ್ಲಿ ಎರಡು ಬಾರಿ ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡಲಾಯಿತು.






