ಅಕ್ರಮ ಮರಳು ಸಾಗಣಿಕೆಗೆ ಬೆಂಬಲ ನೀಡದಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾರೆ : ಶಾಸಕಿ ಕರೆಮ್ಮ ಜಿ.ನಾಯಕ್ ಆರೋಪ

ದೇವದುರ್ಗ: "ಅಕ್ರಮ ಮರಳು ಸಾಗಣಿಕೆಗೆ ಅವಕಾಶ ನೀಡಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ನೂರಾರು ಮರಳು ಸಾಗಿಸುವವರು ನನ್ನ ನಿವಾಸಕ್ಕೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ್ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿವಾರ ಅಕ್ರಮ ಮರಳು ದಂಧೆಯ ತಂಡವೊಂದು ಏಕಾಏಕಿ ನಮ್ಮ ಮನೆಗೆ ನುಗ್ಗಿ, ರಾಯಲ್ಟಿ ಇಲ್ಲದೆ ಮರಳು ಸಾಗಿಸಲು ಅವಕಾಶ ನೀಡಬೇಕೆಂದು ಬಹಿರಂಗವಾಗಿ ಒತ್ತಾಯಿಸಿದ್ದಾರೆ. ಅಕ್ರಮ ಮರಳು, ಮಟ್ಕಾ, ಗಾಂಜಾ ಹಾಗೂ ಮದ್ಯ ಸಾಗಾಣಿಕೆಗೆ ನನ್ನ ಬೆಂಬಲವಿಲ್ಲ ಎಂದು ಹೇಳಿದರೂ ನೂರಾರು ಜನರು ಮನೆ ಮುಂದೆ ಜಮಾಯಿಸಿ ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ದೇವದುರ್ಗ ತಾಲೂಕಿನಲ್ಲಿ ಮರಳು ಮಾಫಿಯಾ ಮಿತಿಮೀರಿದೆ. ನನ್ನ ಮನೆವರೆಗೆ ದಂಧೆಕೋರರು ಬಂದಿರುವ ಹಿಂದೆ ಪ್ರಭಾವಿಗಳ ಕೈವಾಡವಿದೆ. ಅಕ್ರಮ ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಇಲಾಖೆಯೇ ದಂಧೆಗೆ ಸಹಕರಿಸುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಅವರು ಹೇಳಿದರು.
ಟ್ರ್ಯಾಕ್ಟರ್ ಮೂಲಕ ಸ್ಥಳೀಯ ಕಾಮಗಾರಿಗಳಿಗೆ ಮರಳು ಒಯ್ಯಲು ಅಭ್ಯಂತರವಿಲ್ಲ, ಆದರೆ ರಾಯಲ್ಟಿ ಇಲ್ಲದೆ ಟಿಪ್ಪರ್‌ಗಳಲ್ಲಿ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಸಾಗಿಸುವುದು ಕಾನೂನು ಬಾಹಿರ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶರಣಪ್ಪ ಬಳೆ, ಅಮರೇಶ ಪಾಟೀಲ್, ಬಸನಗೌಡ ದೇಸಾಯಿ, ಇಸಾಕ್ ಮೇಸ್ತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ ಟಿಪ್ಪರ್ ಮಾಲಕರು ಇಎಂಐ ಕಟ್ಟಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಕಷ್ಟಗಳನ್ನು ಹೇಳಿಕೊಳ್ಳಲು ಶಾಸಕಿಯನ್ನು ಭೇಟಿ ಮಾಡಿದ್ದೇವೆಯೇ ಹೊರತು ಯಾವುದೇ ಬೆದರಿಕೆ ಹಾಕಿಲ್ಲ. ಶಾಸಕರಿಗೆ ನಾವು ಧಮ್ಕಿ ಹಾಕಿದ ದಾಖಲೆಗಳಿದ್ದರೆ ಅವರು ಬಿಡುಗಡೆ ಮಾಡಲಿ. ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಲಿ.
-ಶ್ರೀನಿವಾಸ ನಾಯಕ್, ಯುವ ಮುಖಂಡರು







