ದೇವದುರ್ಗ | ಮರ್ಯಾದೆಗೇಡು ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಲು ದಲಿತಪರ ಒಕ್ಕೂಟದಿಂದ ಮನವಿ

ದೇವದುರ್ಗ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಖಂಡಿಸಿ ಹತ್ಯೆಗೀಡಾದ "ಮಾನ್ಯ" ಳ ಹೆಸರಲ್ಲಿ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ದೇವದುರ್ಗ ತಾಲೂಕಿನ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಅಂತರ್ ಜಾತಿ ವಿವಾಹಗಳನ್ನು ಒಪ್ಪಲಾರದ ಜಾತೀಯತೆಯ ರೋಗಪೀಡಿತ ಮನೋಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ ಮತ್ತು ಹೆಚ್ಚಾಗುತ್ತಲೇ ಇರೋದು ದುರಂತ. ಇದು ಸಮ ಸಮಾಜ ನಿರ್ಮಾಣದ ಎಲ್ಲಾ ಬಗೆಯ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕಿಬಿಡುತ್ತವೆ ಎಂದು ಆರೋಪಿಸಿದರು.
ಜಾತಿ ದ್ವೇಷದಿಂದ ಪ್ರೇಮಿಗಳ ಹಾಗೂ ದಂಪತಿಗಳ ಮೇಲೆ ಹಲ್ಲೆ, ಕೊಲೆ ನಡೆದರೆ ಘೋರ ಅಪರಾಧ ಎಂದು ಪರಿಗಣಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಕ್ರೌರ್ಯವನ್ನು ಸಾಮಾಜಿಕ ಘನತೆ, ಮೌಲ್ಯ ಎಂದು ಪ್ರತಿಷ್ಠಾಪಿಸುವ ಅಪಾಯ ಎದುರಾಗುತ್ತದೆ ಎಂದು ದೂರಿದರು.
ಈ ಸಂದರ್ಭದಲ್ಲಿ ವಿಶ್ವನಾಥ್ ಬಲ್ಲಿದವ್, ಮೊಹನ್ ಬಲ್ಲಿದವ್, ಹನುಮಂತ ಮನ್ನಾಪೂರಿ, ಹನುಮೇಶ ನಾಯಕ್, ಕ್ರಾಂತಿ ಕುಮಾರ, ಮಹಾಂತೇಶ ಭವಾನಿ, ರಂಗನಾಥ ಕೊಂಬಿನ್, ಚಂದ್ರು ನಾಯಕ್ ಮತ್ತಿತರು ಉಪಸ್ಥಿತರಿದ್ದರು.





