ದೇವದುರ್ಗ | ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಿ: ಸಿಇಒ ಈಶ್ವರ್ ಕಾಂದೂ

ದೇವದುರ್ಗ: ಜಿಲ್ಲಾ ಪಂಚಾಯಿತಿ ರಾಯಚೂರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಅವರು ದೇವದುರ್ಗ ತಾಲೂಕಿನ ಮಲದಕಲ್, ರಾಮದುರ್ಗ ಹಾಗೂ ಮಸರಕಲ್ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದರು.
ಮಲದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಮಕ್ಕಳ ಹಾಜರಾತಿ, ಪೌಷ್ಟಿಕ ಆಹಾರ ಹಾಗೂ ಮೊಟ್ಟೆ ವಿತರಣೆ ಕುರಿತು ಮಾಹಿತಿ ಪಡೆದರು. ಬಳಿಕ ಗ್ರಾಮ ಪಂಚಾಯಿತಿಯ ವಿವಿಧ ಕಡತಗಳನ್ನು ಪರಿಶೀಲಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಸಂಗ್ರಹಣೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದ ಅವರು, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶಾಶ್ವತ ಕಟ್ಟಡ ನಿರ್ಮಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಸಪ್ಪ ಅವರಿಗೆ ನಿರ್ದೇಶನ ನೀಡಿದರು. ಕಸ ಸಂಗ್ರಹಣೆ ಹಾಗೂ ವಿಂಗಡಣೆ ವ್ಯವಸ್ಥಿತವಾಗಿ ನಡೆಯಬೇಕು. ಓಎಚ್‌ಟಿ ಟ್ಯಾಂಕ್‌ಗಳನ್ನು ಪ್ರತಿ ತಿಂಗಳು ಸ್ವಚ್ಛಗೊಳಿಸಿ, ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಬೇಕು ಎಂದು ಸೂಚಿಸಿದರು.
ಅಲ್ಲದೆ, ವಿಬಿ-ಜಿ ರಾಮ್-ಜಿ ಯೋಜನೆಯಡಿ ಹೆಚ್ಚಿನ ಮಾನವ ದಿನಗಳ ಸೃಜನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಗೆ ಆದ್ಯತೆ :
ನಂತರ ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಇಒ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕು. ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಕ್ತಿ ಕೇಂದ್ರದ ಕಾರ್ಯಚಟುವಟಿಕೆ ಪರಿಶೀಲನೆ :
ಬಳಿಕ ಮಸರಕಲ್ ಶಕ್ತಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಕೇಂದ್ರದಲ್ಲಿ ಉತ್ಪಾದಿಸಲಾಗುತ್ತಿರುವ ರಾಗಿ, ಗೋಧಿ ಹಾಗೂ ಹೆಸರುಕಾಳಿನ ಉತ್ಪನ್ನಗಳ ತಯಾರಿಕೆ ಮತ್ತು ವಿತರಣೆ, ನವೀಕರಣ ಕಾಮಗಾರಿಗಳು, ಸಾರಿಗೆ ವ್ಯವಸ್ಥೆ ಹಾಗೂ ವಿವಿಧ ಗ್ರಾಮಗಳಿಗೆ ಆಹಾರ ಪದಾರ್ಥಗಳ ಸರಬರಾಜಿನ ಕುರಿತು ಮಾಹಿತಿ ಪಡೆದರು.
SAM, MAM ಮಕ್ಕಳ ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸರಬರಾಜು ಮತ್ತು ಫಲಾನುಭವಿಗಳ ವಿವರಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ನಾಯಕ್ ಅವರಿಂದ ಪಡೆದುಕೊಂಡರು. ಶಕ್ತಿ ಕೇಂದ್ರದ ಅಭಿವೃದ್ಧಿ ಹಾಗೂ ಕಾರ್ಯಚಟುವಟಿಕೆಗಳಿಗೆ KHPT ಸಂಸ್ಥೆಯವರು ನಿರಂತರ ಸಹಕಾರ ನೀಡಬೇಕು ಎಂದು ಸೂಚಿಸಿದರು.
ನಂತರ ಶಕ್ತಿ ಕೇಂದ್ರದ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಅವರು, ಸಿಬ್ಬಂದಿಯ ಸಮಸ್ಯೆಗಳು ಹಾಗೂ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದರು. ಕೇಂದ್ರದಲ್ಲಿರುವ ಯಂತ್ರೋಪಕರಣಗಳ ಕಾರ್ಯವೈಖರಿಯನ್ನು ಪರಿಶೀಲಿಸಿ, ಅವುಗಳ ನಿರ್ವಹಣೆ ಹಾಗೂ ಕಾರ್ಯಾಚರಣೆ ಕುರಿತು ನೋಡಲ್ ಅಧಿಕಾರಿ ಶರ್ಪುನ್ನಿಸ ಬೇಗಂ ಅವರಿಂದ ವಿವರ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ರಾಯಚೂರಿನ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಸಹಾಯಕ ನಿರ್ದೇಶಕರಾದ ಶರ್ಪುನ್ನಿಸ (ಪಂಚಾಯತ್ ರಾಜ್), ಸಹಾಯಕ ನಿರ್ದೇಶಕರಾದ ಶ್ರೀಮತಿ ಮಹೇಶ್ವರಿ (ಆಡಳಿತ), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ನಾಯಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಸಪ್ಪ (ರಾಮದುರ್ಗ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ವೇತಾ (ಮಸರಕಲ್), ಕೆ.ಹೆಚ್.ಪಿ.ಟಿ. ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.






