Devadurga | 20 ದಿನಗಳಿಂದ ಟ್ರಾನ್ಸ್‌ಫಾರ್ಮರ್ ದೋಷ; ಜೆಸ್ಕಾಂ ಕಚೇರಿಗೆ ನುಗ್ಗಿ ರೈತರ ಆಕ್ರೋಶ

ದೇವದುರ್ಗ: ಕಳೆದ 20 ದಿನಗಳಿಂದ ಟ್ರಾನ್ಸ್‌ಫಾರ್ಮರ್ ಸುಟ್ಟು ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಳಿಗೆ ನೀರು ಹರಿಸಲಾಗದೆ ಬೇಸತ್ತ ರೈತರು ಸೋಮವಾರ ಪಟ್ಟಣದ ಜೆಸ್ಕಾಂ ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಜೋಳದಹೆಡಗಿ, ವಗಡಂಬಳಿ, ದೊಂಡಂಬಳಿ, ಮೆದರಗೋಳ, ಗೋಪಾಳಾಪುರ, ನಗರಗುಂಡ, ಕರ್ಕಿಹಳ್ಳಿ, ಪರ್ತಾಪುರ, ಸಾಸ್ವಿಗೇರ, ನಾಮನಾಯಕ ತಾಂಡಾ, ಶಿವಂಗಿ, ಅಂಚೆಸೂಗುರು, ಹೂವಿನಹೆಡಗಿ ಸೇರಿದಂತೆ ಹಲವು ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಪಕ್ಕದ ಜಿಲ್ಲೆಗಳಲ್ಲಿ 9 ಗಂಟೆಗಳ ವಿದ್ಯುತ್ ಪೂರೈಕೆ ಇದ್ದರೂ ದೇವದುರ್ಗ ತಾಲ್ಲೂಕಿನಲ್ಲಿ ಕೇವಲ 7 ಗಂಟೆಗಳ ಪೂರೈಕೆ ನೀಡಲಾಗುತ್ತಿದೆ. ಅದಲ್ಲದೆ ಪ್ರತಿ 10 ನಿಮಿಷಕ್ಕೊಮ್ಮೆ ವಿದ್ಯುತ್ ಕಡಿತವಾಗುತ್ತಿರುವುದರಿಂದ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ದೂರಿದರು.
ವಿದ್ಯುತ್ ಕಂಬಗಳು ಬೀಳುವುದು, ತಂತಿಗಳು ತುಂಡಾಗುವುದು ಸಾಮಾನ್ಯವಾಗಿದ್ದು, ಈ ಕುರಿತು ಮಾಹಿತಿ ನೀಡಲು ಕರೆ ಮಾಡಿದರೂ ಲೈನ್‌ಮನ್‌ಗಳು ಕರೆ ಸ್ವೀಕರಿಸುವುದಿಲ್ಲ ಅಥವಾ ಮೊಬೈಲ್ ಸ್ವಿಚ್ ಆಫ್ ಮಾಡುತ್ತಾರೆ ಎಂದು ರೈತರು ಆರೋಪಿಸಿದರು. ಈ ನಿರ್ಲಕ್ಷ್ಯದಿಂದ ರೈತರಿಗೆ ಯಾವುದೇ ಅನಾಹುತ ಸಂಭವಿಸಿದರೆ ಜೆಸ್ಕಾಂ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಸಂಪರ್ಕಕ್ಕಾಗಿ 2 ಲಕ್ಷ ರೂ. ಡಿಮ್ಯಾಂಡ್ ಮಾಡಲಾಗಿದೆ ಎಂದು ಆರೋಪಿಸಿದ ರೈತರು ಜೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಸರ್ಕಾರದಲ್ಲಿ ಬಜೆಟ್ ಇಲ್ಲ, ನೀವೇ ಪಟ್ಟಿ ಕೊಡಿ ಟ್ರಾನ್ಸ್‌ಫಾರ್ಮರ್ ವ್ಯವಸ್ಥೆ ಮಾಡಿಕೊಡುತ್ತೇವೆ ಎಂಬ ಅಧಿಕಾರಿಗಳ ಉತ್ತರ ಬೇಜವಾಬ್ದಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಹಾಗೂ ಸ್ಥಳೀಯ ಶಾಸಕಿ ಕರೆಮ್ಮ ಜಿ. ನಾಯಕ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ, ತಕ್ಷಣ ಸುಟ್ಟ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಿಸಿ ಸಮರ್ಪಕ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡ ಉಮಾಪತಿ ಗೌಡ, ಶಿಖರೇಶ ಪಾಟೀಲ್,ಮಲ್ಲನಗೌಡ, ಮಲ್ಲಿಕಾರ್ಜುನ ಜೂಕೂರು, ಲಚಮ್ ರೆಡ್ಡಿ, ಮಹದೇವಪ್ಪಗೌಡ, ಬಸನಗೌಡ, ಅಮಾತೆಣ್ಣ ಗೌಡ,ಶರಣಬಸವ ಬಿರಾದಾರ, ಶಂಕರಗೌಡ ರೈತರ ಮುಖಂಡರು ಉಪಸ್ಥಿತರಿದ್ದರು.






