ದೇವದುರ್ಗ | ಕಾಮಗಾರಿಗಳಿಗೆ ನಿಯಮಾನುಸಾರ ಮರಳು ನೀಡಲು ಆಗ್ರಹಿಸಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ದೇವದುರ್ಗ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು )ಸಂಘಟನೆಯ ಮುಖಂಡರು, ಗುರುವಾರ ದೇವದುರ್ಗ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸ್ಥಳೀಯ ಕಾಮಗಾರಿಗಳಿಗೆ ಕಟ್ಟಡ ನಿರ್ಮಾಣ ಮಾಡಲು ಸರಕಾರದಿಂದ ನಿಯಮಾನುಸಾರ ಮರಳು ನೀಡಲು ಆಗ್ರಹಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕಟ್ಟಡ ಕಾರ್ಮಿಕರು ಸಣ್ಣ ಪುಟ್ಟ ಮನೆಗಳು, ಗ್ರಾಮ ಪಂಚಾಯತಿ ಕಾಮಗಾರಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಮರಳು ಸಿಗದೆ ಕೆಲಸ ಕಳೆದುಕೊಂಡು ಹೊರ ರಾಜ್ಯಗಳಿಗೆ ವಲಸೆ ಹೊಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ವಸತಿ ಯೋಜನೆಯ ಮನೆಗಳು ನಿರ್ಮಾಣ ಮಾಡಿಕೊಳ್ಳುವ ಬಡವರಿಗೂ ಕಷ್ಟವಾಗುತ್ತಿದೆ. ಹೀಗಾಗಿ ಸರಕಾರದ ನಿಯಮದ ಪ್ರಕಾರ ಸ್ಥಳೀಯರಿಗೆ ಗ್ರಾಮ ಪಂಚಾಯತಿಗಳ ಮುಖಾಂತರ ಮರಳು ಕೇಂದ್ರಗಳನ್ನು ಸ್ಥಾಪಿಸಬೇಕು. ಜಿಲ್ಲಾಡಳಿತ ಕಾರ್ಮಿಕರಿಗೆ ಬಡವರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಜಂಟಿ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ, ರೈತ ಮುಖಂಡ ನರಸಣ್ಣ ನಾಯಕ, ಗಿರಿಯಪ್ಪ ಪೂಜಾರಿ, ಕಟ್ಟಡ ಕಾರ್ಮಿಕ ಸಂಘಟನೆ ತಾಲೂಕು ಅಧ್ಯಕ್ಷ ಪಿಡ್ಡಪ್ಪ ನಾಯಕ , ಕಾರ್ಯದರ್ಶಿ ಯೂಸುಫ್ ಸಾಬ್, ವಿದ್ಯಾರ್ಥಿ ಮುಖಂಡ ಮಹಾಲಿಂಗ ದೊಡ್ಡಮನಿ ಪ್ಯಾಟಪ್ಪ, ಯಲ್ಲಪ್ಪ ಗ್ರಾಮ ಪಂಚಾಯಿತಿ ಸದಸ್ಯರು, ಶರೀಫ್, ಖಾಜಾ ಹುಸೇನಪ್ಪ, ಬಸವರಾಜ ಚಿಂಚೋಡಿ, ಹನುಮಂತ ದೊಡ್ಡಮನಿ, ಶಾಂತಪ್ಪ ಗಾಣಧಾಳ, ಹನುಮಂತ ಗುರಿಕಾರ ಮತ್ತು ಇತರರು ಇದ್ದರು.





