ದೇವದುರ್ಗ | ಅಂಬೇಡ್ಕರ್, ಟಿಪ್ಪು ಸುಲ್ತಾನ್ ರಿಗೆ ಅವಮಾನಿಸುವ ವಿಡಿಯೋ ವೈರಲ್; ದಲಿತಪರ ಸಂಘಟನೆಗಳಿಂದ ಕ್ರಮಕ್ಕೆ ಮನವಿ

ದೇವದುರ್ಗ: ಸಾಮಾಜಿಕ ಜಾಲತಾಣದಲ್ಲಿ ಹಲವು ದಿನಗಳಿಂದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಬಗ್ಗೆ ಅವಮಾನಿಸುವ ವಿಡಿಯೋಗಳನ್ನು ಪೋಸ್ಟ್ ಮಾಡಿದವರ ಮೇಲೆ ಪ್ರಕರಣ ದಾಖಲಿಸುವಂತೆ ತಾಲೂಕಿನ ದಲಿತ ಪರ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಮಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದಿಂದ, ಸಹಬಾಳ್ವೆಯಿಂದ ಪ್ರತಿಯೊಬ್ಬರು ಜೀವಿಸುವ ಹಕ್ಕನ್ನು ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮತ್ತು ತಮ್ಮ ಆಡಳಿತಾವಧಿಯಲ್ಲಿ ಮಹಿಳಾ ಸಮಾನತೆ, ಮೈಸೂರು ಅರಮನೆ ವಿಸ್ತರಿಸಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಬ್ರಿಟಿಷರಿಂದ ದೇಶಕ್ಕಾಗಿ ಬಲಿಯಾದ ಟಿಪ್ಪು ಸುಲ್ತಾನ್ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ "_trol_page_hindu" ಎಂಬ ಖಾತೆಯಿಂದ ಅವಹೇಳನಕಾರಿ ವೀಡಿಯೋ ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಅಡಿಷನಲ್ ಎಸ್ಪಿ ಹರೀಶ್ ಕುಮಾರ್ ಮತ್ತು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಅವರು ಕಿಡಿಗೇಡಿಗಳು ಯಾರೇ ಇದ್ದರೂ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ತಾಲೂಕು ಪ್ರಧಾನ ಕಾರ್ಯದರ್ಶಿ ಮೋಹನ್ ಬಲ್ಲಿದವ್, ಛಲವಾದಿ ಮಹಾಸಭಾ ತಾ.ಅಧ್ಯಕ್ಷ ಮಹಾಂತೇಶ್ ಭವಾನಿ, ಎಮ್ ಆರ್ ಎಚ್ ಎಸ್ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಮನ್ನಾಪುರ, ವೆಂಕನೌಡ ನಾಯಕ್ ವಕೀಲರು, ಯಲ್ಲಪ್ಪ ಆಲ್ದರ್ಥಿ, ಖಾಜಾ ಸಾಬ್, ವಲೀ ಖುರೇಷಿ, ಬಂದೇನವಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







