ದೇವದುರ್ಗ | ಬೆಟ್ಟದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ಅಗ್ನಿಶಾಮಕ ದಳದಿಂದ ಹರಸಾಹಸ

ದೇವದುರ್ಗ: ಪಟ್ಟಣದ ಗೌರಂಪೇಟ್ ಹತ್ತಿರದ ಭಾರತ ಪೆಟ್ರೋಲ್ ಬಂಕ್ ಹಿಂಭಾಗದ ಬೆಟ್ಟದಲ್ಲಿ ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸುಡುಬಿಸಿಲಿನ ಪರಿಣಾಮವಾಗಿ ಈ ರೀತಿಯ ಬೆಂಕಿ ಅವಘಡಗಳು ಸಂಭವಿಸುತ್ತಿರುವುದಾಗಿ ತಿಳಿದು ಬಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಆದರೆ, ಬೆಟ್ಟದ ಮೇಲೆ ಅಗ್ನಿಶಾಮಕ ವಾಹನಗಳು ತೆರಳಲು ಸೂಕ್ತ ರಸ್ತೆ ಸಂಪರ್ಕ ಇಲ್ಲದ ಕಾರಣ ಬೆಂಕಿ ನಂದಿಸುವ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ರಸ್ತೆ ಸೌಲಭ್ಯಗಳ ಕೊರತೆಯಿಂದ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಆದರೂ ಬೆಂಕಿ ನಂದಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಅಗ್ನಿಶಾಮಕ ಅಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಇನ್ನೊಂದೆಡೆ ಅರಣ್ಯ ವಲಯಾಧಿಕಾರಿ ಅಲಿಮುದ್ದೀನ್ ಅವರು, ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬೆಟ್ಟದ ಸುತ್ತಮುತ್ತ ಹಾಗೂ ಕೆಳಭಾಗದಲ್ಲಿ ವಾಸಿಸುವ ಜನರು ಭಯಭೀತರಾಗಿದ್ದು, ಬೆಂಕಿ ನಿಯಂತ್ರಣಕ್ಕೆ ತರುವ ಕಾರ್ಯಾಚರಣೆ ಮುಂದುವರಿದಿದೆ.






