ದೇವದುರ್ಗ | ಮಕ್ಕಳಿಗೆ ಪೋಕ್ಸೋ ಸೇರಿದಂತೆ ಕಾನೂನು ಸುವ್ಯವಸ್ಥೆಯ ಬಗ್ಗೆ ಜಾಗೃತಿ ಅನಿವಾರ್ಯ : ಮಂಜುನಾಥ್ ಸಿಲವೇರಿ

ದೇವದುರ್ಗ : ತಾಲೂಕಿನ ಪೋಲಿಸ್ ಇಲಾಖೆಯ ವತಿಯಿಂದ ನಗರದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಡ್ರಗ್ಸ್ ಅಪಾಯಗಳು ಹಾಗೂ ಸಂಚಾರಿ ನಿಯಮಗಳ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಶಾಲೆಗೆ ಬೇಟಿ ನೀಡಿದ ವೃತ್ತ ನಿರೀಕ್ಷಕರಾದ ಮಂಜುನಾಥ್ ಸೀಲವೇರಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಅನೇಕ ಗಂಭೀರ ಸಾಮಾಜಿಕ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಅವರ ಸ್ಥಾನದಲ್ಲಿ ನಿಂತು ಅವರ ಸಮಸ್ಯೆಗಳನ್ನು ಆಲಿಸಿ, ಆತ್ಮೀಯವಾಗಿ ವರ್ತಿಸುವುದು ಅಗತ್ಯ ಎಂದು ಹೇಳಿದರು.
ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಘಟನೆಗಳು ನಡೆದರೆ, ವಿದ್ಯಾರ್ಥಿಗಳು ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕು. ಹೀಗೆ ಮುಂದೆ ಬಂದರೆ ಇತರರು ಸಹ ಧೈರ್ಯಪಟ್ಟು ನ್ಯಾಯಕ್ಕಾಗಿ ಮುಂದಾಗುತ್ತಾರೆ ಎಂದು ಅವರು ಹೇಳಿದರು.
ಡ್ರಗ್ಸ್ ಸೇವನೆಯಿಂದ ಯುವಜನರ ಜೀವನದಲ್ಲಿ ಅಪಾರ ನಷ್ಟ ಉಂಟಾಗುವ ಸಾಧ್ಯತೆಗಳಿವೆ ಎಂಬುದನ್ನು ಎಚ್ಚರಿಸಿದ ಅವರು, ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ವಾಹನ ಚಾಲನೆ ಮಾಡಬೇಕು. ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಲು ಶಿಕ್ಷಕರು ಮತ್ತು ಪೋಷಕರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.







