ಧರ್ಮಸ್ಥಳ ಸರಣಿ ಹತ್ಯೆ ಆರೋಪ | ನಿಷ್ಪಕ್ಷ ತನಿಖೆ ನಡೆಸಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳಿಂದ ಧರಣಿ

ರಾಯಚೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಹಿಂದೆ ಇರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಿಂಧನೂರು ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು
ಸಿಂಧನೂರಿನ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಪಿ.ರುದ್ರಪ್ಪಅವರು, ಧರ್ಮಸ್ಥಳದಲ್ಲಿ ಕಾಣೆಯಾದ ನೂರಾರು ಹೆಣ್ಣುಮಕ್ಕಳ ಪ್ರಕರಣಗಳ ಬಗ್ಗೆ ಸರಕಾರಗಳು ಧ್ವನಿ ಎತ್ತದೇ ಇರುವುದು ಬಹಳ ಆಘಾತಕಾರಿ. ಈ ವಿಚಾರದಲ್ಲಿ ಜನಪ್ರತಿನಿಧಿಗಳು ತಕ್ಷಣವೇ ಪ್ರತಿಕ್ರಿಯಿಸಬೇಕಾಗಿತ್ತು. ನ್ಯಾಯ ದೊರೆಯಬೇಕಾದ ಸಂತ್ರಸ್ತರು ಮತ್ತಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರಕರಣವನ್ನು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು ಎಂದು ಹೇಳಿದರು.
ಈ ವೇಳೆ ಹೋರಾಟಗಾರ ಬಾಸ್ಮಿಯಾ ಮಾತನಾಡಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷ ಶಕುಂತಲಾ, ಅಂಗನವಾಡಿ ಅಧ್ಯಕ್ಷೆ ಸುಲೋಚನಾ, ಕರ್ನಾಟಕ ಜನಶಕ್ತಿ ಜಿಲ್ಲಾ ಮುಖಂಡ ಬಸವರಾಜ್ ಬಾದರ್ಲಿ, ಡಿ.ಹೆಚ್ ಕಂಬಳಿ, ಜಮಾಅತೆ ಇಸ್ಲಾಂ ಹಿಂದ್ ಮುಖಂಡ ಹುಸೇನಸಾಬ, ಅಬುಲೈಸ್, ಚಂದ್ರಶೇಖರ ಗೋರೆಬಾಳ, ಚಿಟ್ಟಿಬಾಬು, ಶರಬಣ್ಣ ನಾಗಲಾಪುರ, ಮಂಜುನಾಥ ಗಾಂಧಿನಗರ,ವಾಸಿಂ, ಗಂಗಮ್ಮ ಕಲವಲದೊಡ್ಡಿ ,ಚನ್ನಮ್ಮ ಬಾದರ್ಲಿ ಎಸ್.ದೇವೇಂದ್ರಗೌಡ ಇನ್ನಿತರರು ಉಪಸ್ಥಿತರಿದ್ದರು.





