ಎಸ್‌ಐಆರ್‌ನಲ್ಲಿ ಸಾಮಾನ್ಯ ಮತದಾರರ ಹಕ್ಕಿಗೆ ತಾರತಮ್ಯ : ಪ್ರಕಾಶ್ ರಾಜ್
‘ಎಸ್‌ಐಆರ್ ಪರಿಶೋಧನೆ, ಪ್ರತಿರೋಧ ಪ್ರವಾಸ’ ಕಾರ್ಯಕ್ರಮ

ರಾಯಚೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಣ್ಯರ ಹೆಸರುಗಳನ್ನು ಕೆಲವೇ ಗಂಟೆಗಳಲ್ಲಿ ಮರು ಸೇರ್ಪಡೆ ಮಾಡಲಾಗಿದ್ದು, ಸಾಮಾನ್ಯ ಮತದಾರರು ಮಾತ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದರು.
ನಗರದ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ನಡೆದ ‘ಎಸ್‌ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಪ್ರವಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೆಹಲಿಯಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಭಾರತದ ಮುಖ್ಯ ನ್ಯಾಯಮೂರ್ತಿಯ ಕುಟುಂಬ ಸದಸ್ಯರು ಹಾಗೂ ಚುನಾವಣಾ ಆಯೋಗದ ಒಬ್ಬ ಆಯುಕ್ತರ ಕುಟುಂಬ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದವು ಎಂಬ ವರದಿಗಳು ಬಂದಿವೆ. ಬಳಿಕ ಅವುಗಳನ್ನು ಮರು ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದ ಅವರು, ಸಾಮಾನ್ಯ ಜನರು ಮಾತ್ರ ದಾಖಲೆಗಳು ಮತ್ತು ಇತರ ಪ್ರಕ್ರಿಯೆಗಳಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮತದಾನದ ಸಮಾನ ಹಕ್ಕಿಗೆ ಧಕ್ಕೆ ಆಗಬಾರದು. ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಬಾರದು ಎಂದು ಅವರು ಒತ್ತಾಯಿಸಿದರು.
ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೆ ತರಲು ಸಾಧ್ಯವಾಗದಿರುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ. ಹೀಗಾಗಿ ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಬಳಸಿಕೊಂಡು ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು.
ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಆಯೋಗದ ಅಧಿಕಾರಿಗಳ ಹೇಳಿಕೆಗಳಲ್ಲೇ ಕೆಲವು ಲೋಪಗಳು ಬಹಿರಂಗವಾಗಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಯಾರ ಮಾತು ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮನೆ ಬದಲಾಯಿಸಿದವರು, ಮನೆ ಇಲ್ಲದವರು ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕಿಗೆ ಧಕ್ಕೆ ಆಗಬಾರದು. ಅವಳಿ-ಜವಳಿ ಮಕ್ಕಳ ವಯಸ್ಸಿನ ಅಂತರ ಸೇರಿದಂತೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹೆಸರುಗಳನ್ನು ಕೈಬಿಡುವುದು ಸರಿಯಲ್ಲ ಎಂದು ಹೇಳಿದರು.
ತೃತೀಯ ಲಿಂಗಿಗಳು, ವಲಸೆ ಕಾರ್ಮಿಕರು ಸೇರಿದಂತೆ ವಿವಿಧ ಸಮುದಾಯದ ಜನರಿಂದ ದಾಖಲೆಗಳನ್ನು ಕೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಮತದಾರರ ಸ್ಥಿತಿ ಏನು ಎಂಬುದನ್ನು ಪರಿಗಣಿಸಬೇಕು. ಎಲ್ಲರಿಗೂ ಸಮಾನ ಮತದಾನದ ಹಕ್ಕು ದೊರೆಯಬೇಕು ಎಂದು ಒತ್ತಾಯಿಸಿದರು.
ಎಸ್‌ಐಆರ್ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಒಂದು ತಿಂಗಳ ಅವಧಿಯಲ್ಲಿ ಕೋಟ್ಯಂತರ ಜನರ ಮತದಾರರ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಕರ್ನಾಟಕದ 100 ಮತಗಟ್ಟೆಗಳಿಗೆ ಭೇಟಿ ನೀಡಿ ಎಲ್ಲಿ ಯಾವ ರೀತಿಯ ಲೋಪಗಳಾಗಿವೆ ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸಂತ್ರಸ್ತ ಮತದಾರರಿಂದ ದಾಖಲೆಗಳು ಹಾಗೂ ಮಾಹಿತಿ ಸಂಗ್ರಹಿಸಿ ಸೆಪ್ಟೆಂಬರ್ 30ರಂದು ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಅಕ್ಟೋಬರ್ 1ರಂದು ದೆಹಲಿಯಲ್ಲಿ ಸಭೆ ನಡೆಸಿ ಈ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಗಮನಕ್ಕೆ ತರಲಾಗುವುದು ಎಂದು ಪ್ರಕಾಶ್ ರಾಜ್ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಐಆರ್ ವಿರೋಧಿ ಸಮಿತಿಯ ವೀರಸಂಗಯ್ಯ, ಕೆ.ಎಲ್ ಅಶೋಕ, ಎಂ.ಆರ್.ಬೇರಿ, ಮಾರೆಪ್ಪ ಹರವಿ, ಅಸಿಮುದ್ದೀನ್ ಅಖ್ತರ್, ಮತದಾರರ ಹಕ್ಕು ಕಳೆದುಕೊಂಡಿರುವ ಜಾನ್ ವೆಸ್ಲಿ, ಮಾರೆಮ್ಮ, ಹೋರಾಟಗಾರ ಬಸವರಾಜ ಕಳಸ, ಮತೀನ್ ಅನ್ಸಾರಿ ಉಪಸ್ಥಿತರಿದ್ದರು.






