ನ.12ರಂದು ರಾಯಚೂರಿನಲ್ಲಿ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ

ರಾಯಚೂರು: ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ಜಿಲ್ಲಾ ಬಾಲಭವನ ಸೊಸೈಟಿ ವತಿಯಿಂದ ನವೆಂಬರ್ 12ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. 9ರಿಂದ 16 ವರ್ಷದೊಳಗಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಮಕ್ಕಳು, ಗ್ರಾಮೀಣ ಪ್ರದೇಶದ ಮಕ್ಕಳು, ಸೌಲಭ್ಯ ವಂಚಿತ ಮಕ್ಕಳು, ವಿಶೇಷ ಚೇತನ ಮಕ್ಕಳು, ಬಾಲಕ-ಬಾಲಕಿಯರ ಬಾಲಮಂದಿರದ ಮಕ್ಕಳು ಹಾಗೂ ಸರ್ಕಾರಿ ಸುಧಾರಣಾ ಸಂಸ್ಥೆಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಮೊದಲ ಆದ್ಯತೆಯ ಮೇರೆಗೆ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಸೃಜನಾತ್ಮಕ ಕಲೆಗಳ ವಿಭಾಗದಲ್ಲಿ ಚಿತ್ರಕಲೆ, ಕರಕುಶಲ ಕಲೆ ಹಾಗೂ ಜೇಡಿಮಣ್ಣಿನ ಕಲೆ ಸ್ಪರ್ಧೆಗಳು ನಡೆಯಲಿವೆ. ಸೃಜನಾತ್ಮಕ ಬರವಣಿಗೆಯಲ್ಲಿ ಕಥೆ, ಕವನ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸೃಜನಾತ್ಮಕ ಪ್ರದರ್ಶನ ಕಲೆಗಳ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ ಮತ್ತು ಯೋಗ ಸ್ಪರ್ಧೆಗಳು ನಡೆಯಲಿವೆ. ವಿಜ್ಞಾನ ವಿಭಾಗದಲ್ಲಿ ನೂತನ ಆವಿಷ್ಕಾರಗಳು ಹಾಗೂ ಪ್ರಯೋಗಗಳನ್ನು ಪ್ರದರ್ಶಿಸಲು ಅವಕಾಶವಿದೆ.
ಇದರೊಂದಿಗೆ, ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕಿನಲ್ಲಿ ಆದ ಸಕಾರಾತ್ಮಕ ಬೆಳವಣಿಗೆ’ ಎಂಬ ವಿಷಯದ ಕುರಿತು ವಿಶೇಷ ಭಾಷಣ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. 16 ವರ್ಷದೊಳಗಿನ ಅತ್ಯುತ್ತಮ ಅಭ್ಯರ್ಥಿಯನ್ನು ಜಿಲ್ಲಾ ಅಥವಾ ತಾಲೂಕು ಮಟ್ಟದಲ್ಲಿ ಆಯ್ಕೆ ಮಾಡಿ, ಅವರ ಭಾಷಣವನ್ನು ವಿಡಿಯೋ ಚಿತ್ರೀಕರಿಸಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತ ಮಕ್ಕಳು ನವೆಂಬರ್ 11ರ ಸಂಜೆ 5 ಗಂಟೆಯೊಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕಿ ದೀಪಾ (ಮೊ. 966343137) ಅಥವಾ ಕಚೇರಿ ಸಹಾಯಕಿ ತಾರಮ್ಮ (ಮೊ. 9900409171) ಅವರನ್ನು ಸಂಪರ್ಕಿಸಬಹುದು ಎಂದು ರಾಯಚೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






