ರಾಯಚೂರಿನಲ್ಲಿ ನಡೆಯುವ ಸೇನಾ ನೇಮಕಾತಿ ರ‍್ಯಾಲಿಯ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಂದ ಸೂಚನೆ

ರಾಯಚೂರು: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆ.4 ರಿಂದ 22ರವರೆಗೆ ನಡೆಯುವ ಸೇನಾ ನೇಮಕಾತಿ ರ‍್ಯಾಲಿಯು ಅಚ್ಚುಕಟ್ಟಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸೂಚನೆ ನೀಡಿದರು.
ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜು.16ರಂದು ಪೂರ್ವ ಭಾವಿ ಸಿದ್ಧತಾ ಸಭೆ ನಡೆಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೇನಾ ನೇಮಕಾತಿ ರ‍್ಯಾಲಿಯ ಬಗ್ಗೆ ಈ ಹಿಂದೆ ಜು.4 ರಂದು ಸಭೆ ನಡೆಸಿ ಸೂಚನೆ ನೀಡಿದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಈ ರ‍್ಯಾಲಿಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಂದಾಜು 15,000 ಅಭ್ಯರ್ಥಿಗಳು ಭಾಗವಹಿಸಲಿದ್ದು, ಈ ರ‍್ಯಾಲಿಯ ಯಶಸ್ಸಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ನೇಮಕಾತಿ ರ‍್ಯಾಲಿ ನಡೆಯುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ಕ್ರೀಡಾಂಗಣದಲ್ಲಿ ವಿದ್ಯುತ್ ದೀಪಗಳು ಮತ್ತು ಜನರೇಟರ್ ವ್ಯವಸ್ಥೆ ಮತ್ತು ಆಸನ, ಕುರ್ಚಿಗಳು, ಟೇಬಲ್‌ಗಳು, ಮೈಕ್ ಸೆಟ್, ಖಾಟ್ ಮತ್ತು ಹಾಸಿಗೆ ಹಾಗೂ ತ್ಯಾಜ್ಯದ ತೊಟ್ಟಿಗಳ ವ್ಯವಸ್ಥೆಯಾಗಬೇಕು. ರ‍್ಯಾಲಿಗೆ ಆಗಮಿಸುವ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಇತರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ಕ್ರೀಡಾಂಗಣದಲ್ಲಿ ಜನಸಂದಣಿ ತಡೆಯಬೇಕು. ಕ್ರೀಡಾಂಗಣದ ಹೊರಗಡೆ ಸಾರ್ವಜನಿಕ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಕ್ರೀಡಾಂಗಣದಲ್ಲಿ ಒಳಗೆ ಮತ್ತು ಮುಂಭಾಗದಲ್ಲಿ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಬೇಕು. ಮತ್ತು ಎಲ್ಲಾ ರೀತಿಯ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸೆ ಒದಗಿಸಬೇಕು. ರ‍್ಯಾಲಿ ನಡೆಯುವ ಸಂದರ್ಭದಲ್ಲಿ ಅಗ್ನಿಶಾಮಕ ವಾಹನ ಮತ್ತು ತುರ್ತು ಸೇವೆಗಳ ಒದಗಿಸಲು ಕ್ರಮ ವಹಿಸಬೇಕು.
ಜಿಲ್ಲಾಧಿಕಾರಿಗಳ ಮನವಿ:
ರಾಯಚೂರು ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ‍್ಯಾಲಿ ನಡೆಯುತ್ತಿರುವುದು ವಿಶೇಷ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸೇನೆಗೆ ಸೇರಿದವರ ಸಂಖ್ಯೆ ರಾಯಚೂರು ಜಿಲ್ಲೆಯಲ್ಲಿ ಕಡಿಮೆ ಇದೆ. ಹೀಗಾಗಿ ಈ ಭಾಗದ ವಿದ್ಯಾರ್ಥಿ ಯುವಜನರಿಗೆ ಸೇನೆ ಸೇರುವ ಬಗ್ಗೆ ಸ್ಪೂರ್ತಿ ನೀಡಲೆಂದೇ ಈ ಸೇನಾ ನೇಮಕಾತಿ ರ‍್ಯಾಲಿಯನ್ನು ರಾಯಚೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಮಾಜಿ ಸೈನಿಕರ ಸಂಘದವರು ಮತ್ತು ನಗರದ ಎಲ್ಲ ಸಂಘ ಸಂಸ್ಥೆಗಳು ಈ ಸೇನಾ ನೇಮಕಾತಿ ರ‍್ಯಾಲಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಮನವಿ ಮಾಡಿದರು.
ಮಾಜಿ ಸೈನಿಕರ ಸಲಹೆ:
ಸೇನಾ ನೇಮಕಾತಿ ರ‍್ಯಾಲಿಯು ನಮ್ಮ ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಇದು ಇಡೀ ರಾಜ್ಯಕ್ಕೆ ಮಾದರಿಯಾಗುವ ಹಾಗೆ ಇಲ್ಲಿ ನಡೆಯಬೇಕು. ಬೇರೆ ಬೇರೆ ದೂರದ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ಹಾಗೆ ಇಲ್ಲಿ ರ‍್ಯಾಲಿ ನಡೆಯುವಂತಾಗಬೇಕು ಎಂದು ರಾಯಚೂರಿನ ಮಾಜಿ ಸೈನಿಕರಾದ ಚೆನ್ನಾರೆಡ್ಡಿ, ಸಿದ್ದಯ್ಯ ಸ್ವಾಮಿ, ಅಮರಪ್ಪ ಶಿವಬಲ್ಲ, ದೇವರೆಡ್ಡಿ, ಮಲ್ಲಿಕಾರ್ಜುನ ಸ್ವಾಮಿ ಅವರು ಸಲಹೆ ಮಾಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತರಾದ ಗಜಾನನ ಬಾಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.







