ಅ.30ರಂದು ಸಿದ್ದಪರ್ವತ ಅಂಬಾದೇವಿ ದೇವಸ್ಥಾನದ ಗರ್ಭಗುಡಿ ಉದ್ಘಾಟನೆ: ಡಿ.ಕೆ. ಶಿವಕುಮಾರ್ ಆಗಮನ

ಸಿಂಧನೂರು: ತಾಲ್ಲೂಕಿನ ಸಿದ್ದಪರ್ವತ ಶ್ರೀ ಅಂಬಾದೇವಿ ದೇವಸ್ಥಾನದ ಗರ್ಭಗುಡಿ ಉದ್ಘಾಟನಾ ಸಮಾರಂಭಕ್ಕೆ ಅ.30ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬಾದೇವಿ ದೇವಸ್ಥಾನದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಅಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸಚಿವರು, ಶಾಸಕರು ಹಾಗೂ ಸಂಸದರು ಭಾಗವಹಿಸಲಿದ್ದಾರೆ. ಮುಜರಾಯಿ ಇಲಾಖೆಯ ನಿಯಮಗಳ ಪ್ರಕಾರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಅ.19ರಿಂದ ಮೂರು ದಿನ ಸಿಂಧನೂರು ದಸರಾ ಉತ್ಸವ :
ಅ.19, 20 ಮತ್ತು 21ರಂದು ಸಿಂಧನೂರು ದಸರಾ ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ಹಾಗೂ ತೀವ್ರ ಬರಗಾಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಳವಾಗಿ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಬಾದರ್ಲಿ ತಿಳಿಸಿದರು.
ಅಕ್ಟೋಬರ್ 19ರಂದು ಸಂಜೆ ತುಂಗಭದ್ರಾ ನದಿಗೆ ಆರತಿ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ವಾರಣಾಸಿಯ ಅರ್ಚಕರ ತಂಡ ಆಗಮಿಸಲಿದ್ದು, ತಾಲ್ಲೂಕಿನ ಎಲ್ಲ ಪೂಜ್ಯರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನೆರವೇರಲಿದೆ. ಎರಡನೇ ದಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಸಂಜೆ ಯುವ ದಸರಾ ಕಾರ್ಯಕ್ರಮ ನಡೆಯಲಿದ್ದು, ಚಂದನ್ ಶೆಟ್ಟಿ, ಹನುಮಂತ ಲಮಾಣಿ, ಸುಪ್ರಿಯಾ ಸೇರಿದಂತೆ ಹಲವು ಗಾಯಕರು ಭಾಗವಹಿಸಲಿದ್ದಾರೆ.
ಮೂರನೇ ದಿನ ಸಂಜೆ ಜಂಬೂಸವಾರಿ ನಡೆಯಲಿದೆ. ಆನೆಯ ಮೇಲೆ ಅಂಬಾದೇವಿ ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುವುದು. ಈ ಮೆರವಣಿಗೆಯಲ್ಲಿ ಪುಣೆ ಮೂಲದ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಮೆರವಣಿಗೆಯು ತಹಶೀಲ್ದಾರ್ ಕಚೇರಿಯಿಂದ ಆರಂಭವಾಗಿ ಬಸವ ವೃತ್ತ, ಹಳೇಬಜಾರ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಾಗಿ ಮತ್ತೆ ತಹಸೀಲ್ದಾರ್ ಕಚೇರಿಯನ್ನು ತಲುಪಲಿದೆ. ವಿಶೇಷವಾಗಿ ವಿವಿಧ ಸಮಾಜಗಳ ಸ್ತಬ್ಧಚಿತ್ರಗಳ ಮೆರವಣಿಗೆ ಆಯೋಜಿಸಲಾಗುವುದು. ಸಂಘ-ಸಂಸ್ಥೆಗಳ ಮುಖಂಡರು ಹಾಗೂ ವಿವಿಧ ಸಮಾಜಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಬಾದರ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್ ವಕೀಲ, ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಪದಾಧಿಕಾರಿಗಳಾದ ಶಿವಪ್ಪ, ಶಿವಶಂಕರಗೌಡ, ರಾಘವೇಂದ್ರ ರೆಡ್ಡಿ, ಅಂಬಣ್ಣ ಟಿ. ವಕೀಲರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ರೈತರ ಸಂಕಷ್ಟಕ್ಕೆ ಸ್ಪಂದಿಸಿ, ನವೆಂಬರ್ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸಿ :
ಆಂಧ್ರಪ್ರದೇಶ ಮತ್ತು ತೆಲಂಗಾಣದ ಪಾಲಿನ ನೀರನ್ನು ಪಡೆದುಕೊಂಡು ತುಂಗಭದ್ರಾ ಎಡದಂಡೆ ನಾಲೆಗೆ 90 ದಿನಗಳವರೆಗೆ ಸಮರ್ಪಕವಾಗಿ ನೀರು ಹರಿಸಲು ಸರ್ಕಾರ ಹಾಗೂ ಸಚಿವ ಶಿವರಾಜ್ ತಂಗಡಗಿ ಮುಂದಾಗಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.
ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿ, ರೈತರು ಬೆಳೆದಿರುವ ಬೆಳೆಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಗಮನಹರಿಸಬೇಕು ಎಂದು ಅವರು ಹೇಳಿದರು.
ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಅಜಯ್ ಸಿಂಗ್ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ನಿಯೋಗದೊಂದಿಗೆ ತೆರಳಿ, ಅಲ್ಲಿನ ಮುಖ್ಯಮಂತ್ರಿಗಳ ಮನವೊಲಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಕಳೆದ ಬಾರಿ ನಡೆದ ಐಸಿಸಿ ಸಭೆಯ ಸಂದರ್ಭದಲ್ಲಿ ಜಲಾಶಯದಲ್ಲಿ 82 ಟಿಎಂಸಿ ಅಡಿ ನೀರಿತ್ತು. ಅದರ ಆಧಾರದ ಮೇಲೆ ಜಲಾಶಯದ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹಂಚಿಕೆ ಮಾಡುವ ಕುರಿತು ತೀರ್ಮಾನಿಸಲಾಗಿತ್ತು. ಇದರೊಂದಿಗೆ ಹೆಚ್ಚುವರಿಯಾಗಿ 10 ಟಿಎಂಸಿ ಅಡಿ ನೀರು ಹರಿದುಬರುವ ನಿರೀಕ್ಷೆಯಲ್ಲಿದ್ದು, ಎಡದಂಡೆ ನಾಲೆಗೆ 90 ದಿನಗಳ ಕಾಲ ನೀರು ಹರಿಸಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದರು.
ಆದರೆ, ಈವರೆಗೆ ಕಾಲುವೆಗೆ 40 ದಿನಗಳ ಕಾಲ ಮಾತ್ರ ನೀರು ಒದಗಿಸಲಾಗಿದೆ. ರೈತರ ಬೆಳೆಗಳನ್ನು ಉಳಿಸಲು ನವೆಂಬರ್ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸಬೇಕು. ಇದರ ಜೊತೆಗೆ ಕುಡಿಯುವ ನೀರಿನ ಅಗತ್ಯಕ್ಕಾಗಿ 3ರಿಂದ 4 ಟಿಎಂಸಿ ಅಡಿ ನೀರನ್ನು ಕಾಯ್ದಿರಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.






