ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಸಹಜ, ಅಪಾರ್ಥ ಕಲ್ಪಿಸುವುದು ಬೇಡ : ಯತೀಂದ್ರ ಸಿದ್ದರಾಮಯ್ಯ

ಯತೀಂದ್ರ ಸಿದ್ದರಾಮಯ್ಯ
ರಾಯಚೂರು: ರಾಜ್ಯದ ನಾಯಕರು ಹೈಕಮಾಂಡ್ ಪ್ರಮುಖರನ್ನು ಭೇಟಿಯಾಗುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಅದೇ ರೀತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೆಹಲಿಗೆ ಭೇಟಿ ನೀಡಿದ್ದು, ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಪಕ್ಷಗಳಲ್ಲೂ ನಾಯಕರು ಹೈಕಮಾಂಡ್ ನಾಯಕರನ್ನು ನಿಯಮಿತವಾಗಿ ಭೇಟಿ ಮಾಡುವುದು ಸಾಮಾನ್ಯವಾಗಿದ್ದು, ಇದನ್ನು ರಾಜಕೀಯವಾಗಿ ಅರ್ಥೈಸುವುದು ಬೇಡ ಎಂದರು.
ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಸದನದಲ್ಲೇ ಸ್ಪಷ್ಟನೆ ನೀಡಲಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಪಕ್ಷ ಕೈಬಿಡುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ಅದು ಪಕ್ಷದ ಆಂತರಿಕ ವಿಷಯವಾಗಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.
ಉಪಚುನಾವಣೆಯ ಬಳಿಕ ಸಂಪುಟ ಪುನರ್ರಚನೆ ಕುರಿತು ಮಾತನಾಡುತ್ತಿರುವವರನ್ನೇ ಪ್ರಶ್ನಿಸಬೇಕು ಎಂದು ಹೇಳಿದ ಅವರು, ಪ್ರತಿಯೊಬ್ಬ ಶಾಸಕರಿಗೂ ಸಚಿವರಾಗುವ ಆಸೆ ಸಹಜ. ರಾಯಚೂರು ಜಿಲ್ಲೆಯ ಶಾಸಕರೂ ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ. ಆದರೆ ಅಂತಿಮ ಆಯ್ಕೆ ಹೈಕಮಾಂಡ್ ಕೈಯಲ್ಲಿದೆ ಎಂದರು.
ಜಿಲ್ಲೆಯಲ್ಲಿ ಕುರುಬ ಸಮಾಜದವರು ರಾಜಕೀಯವಾಗಿ ಸಶಕ್ತರಾಗಿದ್ದು, ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು, ಮುಖಂಡರಾದ ಕೆ.ಸಿ.ಅಯ್ಯಣ್ಣ,ಮೊಹಮ್ಮದ್ ಶಾಲಂ, ಸಾಜೀದ್ ಸಮೀರ್, ಎಂ.ಈರಣ್ಣ ಸೇರಿ ಅನೇಕರಿದ್ದರು.






