ಸಾಹಿತ್ಯಕ್ಕೆ ಸಂಬಂಧಗಳನ್ನು ಜೋಡಿಸುವ ಶಕ್ತಿ ಇದೆ : ಡಾ.ಗೊ.ರು.ಚನ್ನಬಸಪ್ಪ
ರಾಯಚೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ

ರಾಯಚೂರು : ಸಾಹಿತ್ಯಕ್ಕೆ ಸಂಬಂಧಗಳನ್ನು ಜೋಡಿಸುವ ಶಕ್ತಿ ಇದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಮಾಜಿಕ ಜವಾಬ್ದಾರಿಯಿದ್ದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಕನ್ನಡ ಸಾಹಿತ್ಯವನ್ನು ಬೆಳೆಸಬೇಕು ಎಂದು ಹಿರಿಯ ಸಾಹಿತಿ, ನಾಡೋಜ ಡಾ.ಗೊ.ರು.ಚನ್ನಬಸಪ್ಪ ಸಲಹೆ ನೀಡಿದರು.
ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಅಯೋಜಿಸಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಬೃಹತ್ ಸ್ವಾಯತ್ತ ಸಂಸ್ಥೆಯಾಗಿ ಬೆಳೆದಿದೆ. ಅನೇಕ ಯುವಕರು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಒಳ್ಳೆಯ ಬೆಳವಣಿಗೆ. ಧಾರ್ಮಿಕ, ಸಾಂಸ್ಕೃತಿಕ ಜೀವಿಗಳು ಸಾಹಿತ್ಯ ಪರಿಷತ್ತಿನಲ್ಲಿ ಭಾಗಿಯಾಗಬೇಕು. ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಚಟುವಟಿಕೆಗಳನ್ನು ರೂಪಿಸಿ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ರಾಜಕಾರಣಿಗಳು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿದರೆ ಕಲುಷಿತವಾಗುತ್ತದೆ ಎಂಬ ಆಲೋಚನೆ ಇದೆ. ಸಾಹಿತ್ಯ, ಅಭಿರುಚಿ ಮತ್ತು ಆಸಕ್ತಿ ಇದ್ದರೆ ಪಾಲ್ಗೊಳ್ಳಲಿ ವಿರೋಧ ಸರಿಯಲ್ಲ ಎಂದರು.
12ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸಿ ಹೊಸ ಪ್ರಯೋಗ ಮಾಡಿ ಜಾತಿ, ಧರ್ಮ, ಬಣ್ಣ, ಲಿಂಗ ತಾರತಮ್ಯವನ್ನು ಅಳಿಸಿಹಾಕಿದ್ದರು. ಶರಣರು ಬಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಜನರಲ್ಲಿ ವೈಚಾರಿಕ ಚಿಂತನೆ ಮೂಡಿಸಬೇಕು. ಇದು ಸಮೂಹ ಶಕ್ತಿಯಾಗಬೇಕು ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಕನ್ನಡ ಭಾಷೆ 2000 ವರ್ಷಗಳಿಂದ ಬೆಳೆದಿದೆ. ಯಾವುದೇ ಅಪಾಯ ತಟ್ಟದೇ ನೋಡಿಕೊಳ್ಳಬೇಕು. ನಾವೆಲ್ಲರೂ ಕನ್ನಡ ಭಾಷೆಯ ಬಗ್ಗೆ ಭಕ್ತಿ, ಶ್ರದ್ಧೆ ಇರಬೇಕು. ಕನ್ನಡವೇ ನಮ್ಮ ಉಸಿರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಕುಮಾರ ನಾಯಕ, ಶಾಂತಮಲ್ಲ ಶಿವಾಚಾರ್ಯರು ಸೇರಿ ಹಲವರು ಉಪಸ್ಥಿತರಿದ್ದರು.








