ರಾಯಚೂರು | ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಈಡಿ ದಾಳಿ ಖಂಡಿಸಿ ಧರಣಿ

ರಾಯಚೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ನಡೆಸಿರುವ ದಾಳಿಯನ್ನು ಖಂಡಿಸಿ ಶುಕ್ರವಾರ ವಾಲ್ಮೀಕಿ ನಾಯಕ ಸಮಾಜ ಮತ್ತು ಅಹಿಂದ ಸಮಾಜದ ವತಿಯಿಂದ ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ವಾಲ್ಮೀಕಿ ಪ್ರತಿಮೆ ಮುಂಭಾಗ ವಾಲ್ಮೀಕಿ ನಾಯಕ ಸಮಾಜದವರು ಜಮಾಯಿಸಿ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ನಾಯಕ ಅಹಿಂದ ನಾಯಕ ಪ್ರಗತಿಪರ ಚಿಂತಕ ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯ ದುರುದ್ದೇಶದಿಂದ ಗುರಿಯಾಗಿಸಿಕೊಂಡು ಈಡಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.
ಸತೀಶ್ ಜಾರಕಿಹೊಳಿ ಅವರು ಸುಮಾರು 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಾ ಚಾರದ ಕಪ್ಪುಚುಕ್ಕೆ ಇಲ್ಲದೆ, ಕಾನೂನು ಚೌಕಟ್ಟಿನಲ್ಲಿ ಉದ್ಯಮ ನಡೆಸಿಕೊಂಡು ಬಂದಿರುವ ಶುದ್ಧಹಸ್ತದ ರಾಜಕಾರಣಿ. ಇಂತಹ ನಾಯಕನ ಮನೆಗಳ ಮೇಲೆ ಈಡಿ ದಾಳಿ ನಡೆಸಿರುವುದು ರಾಜಕೀಯ ದ್ವೇಷದ ಕ್ರಮವಾಗಿದೆ ಎಂದು ದೂರಿದರು. ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶಗಳಿರುವ ಹಿನ್ನೆಲೆಯಲ್ಲಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದ ಈ ಹುನ್ನಾರ ನಡೆಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಯಚೂರು ನಗರದ ವಾಲ್ಮೀಕಿ ಪ್ರತಿಮೆ ಮುಂಭಾಗ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಎನ್.ರಘುವೀರ ನಾಯಕ, ಎ.ರಾಜಶೇಖರ ನಾಯಕ,ಡಾ.ಪ್ರಭು ಹುಲಿನಾಯಕ, ಮೇಟಿ ವಕೀಲರು, ರಾಚಣ್ಣ ನಾಯಕ, ಮಾನಶಯ್ಯ ನಾಯಕ, ರಂಗಪ್ಪ ಗೋಸಲ್,ಮಸ್ತಾನ ನಾಯಕ, ಶರಣ ಬಸವ ನಾಯಕ, ಸದಾಪುರು ಹನುಮೇಶ ನಾಯಕ, ಮಹೇಂದ್ರ ನಾಯಕ,ಭರತ ನಾಯಕ,ಮೌನೇಶ ನಾಯಕ, ಗೋವಿಂದ ನಾಯಕ,ಅಂಜಿನಯ್ಯ ನಾಯಕ, ಗೋವರ್ಧನ ನಾಯಕ,ವಿರುಪಾಕ್ಷಿ ನಾಯಕ,ಮಲ್ಲಿಕಾರ್ಜುನ ನಾಯಕ, ರಂಗಸ್ವಾಮಿ ನಾಯಕ. ತಿಮ್ಮಪ್ಪ ನಾಯಕ, ಉರುಕುಂದ ನಾಯಕ,ರಾಮುಲು ಬಾಯಿದೊಡ್ಡಿ, ನಾರಾಯಣ ನಾಯಕ, ನರೇಂದ್ರ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






