ಲಿಂಗಸುಗೂರು | ಮೂಢನಂಬಿಕೆ, ಅಸಮಾನತೆ ನಿವಾರಣೆಗೆ ಶಿಕ್ಷಣವೇ ಶಕ್ತಿ : ಡಾ.ಖಾಜಾವಲಿ

ಲಿಂಗಸುಗೂರು : ಆಧುನಿಕ ಯುಗದಲ್ಲೂ ಸಮಾಜ ಅಜ್ಞಾನ, ಮೂಢನಂಬಿಕೆ, ಅಸಮಾನತೆ ಮತ್ತು ಅಸ್ಪೃಶ್ಯತೆಯಿಂದ ಮುಕ್ತವಾಗಿಲ್ಲ. ಬೌದ್ಧಿಕ ದಾರಿದ್ರ್ಯ ಸಮಾಜವನ್ನು ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ. ಆದರೆ ಶಿಕ್ಷಣ ಪಡೆದವರೂ ಮಾನವೀಯತೆಯನ್ನು ಮರೆತಿರುವುದು ದುರಂತಕರ. ಬುದ್ದಿ ಬ್ರಹ್ಮಾಂಡವಾಗಿದ್ದರೂ ಹೃದಯ ಬುಡಿಮೆಯಾಗಿರುವ ಸ್ಥಿತಿ ಉಂಟಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ, ಬಂಡಾಯ ಸಾಹಿತಿ ಡಾ.ಖಾಜಾವಲಿ ಈಚನಾಳ ಹೇಳಿದರು.
ಸ್ಥಳೀಯ ಉಮಾಮಹೇಶ್ವರಿ ಸಮೂಹ ಸಂಸ್ಥೆಗಳ ಪದವಿ ಕಾಲೇಜಿನಲ್ಲಿ ‘ವ್ಯಕ್ತಿತ್ವ ವಿಕಸನ’ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಂತರ ಕಾಲೇಜಿನ ಪ್ರಾಚಾರ್ಯ ವೀರೇಶ್ ಆದೋನಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಸಾಧಕರ ಜೀವನವನ್ನು ಅಧ್ಯಯನ ಮಾಡುವ ಮೂಲಕ ಪ್ರೇರಣೆ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಗೆ ಕಾಲೇಜಿನ ವತಿಯಿಂದ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಸ್ಯೆಯ ಆಡಳಿತ ಅಧಿಕಾರಿ ಅಂಬರೀಶ್ ಸ್ವಾಮಿ ತೋರಣದಿನ್ನಿ, ಸಂಯೋಜಕ ಮಸ್ತಾನ್ ಸಾಬ್ ಗುಂತುಗೋಳ, ಸ್ವರ್ಣಲತಾ, ಉಪನ್ಯಾಸಕರಾದ ಜಿ. ಮಂಜುನಾಥ್, ಯಮನಪ್ಪ, ಚನ್ನಬಸವ ಸ್ವಾಮಿ, ಗಂಗಾಧರ, ಬಸವರಾಜ್, ನಿರ್ಮಲ, ಸಾವಿತ್ರಿ, ಶಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







