ಭಾರತ ಚುನಾವಣೆ ಆಯೋಗ ಭಯೋತ್ಪಾದನಾ ಸಂಸ್ಥೆಯಂತೆ ವರ್ತಿಸುತ್ತಿದೆ : ಸಂಸದ ಜಿ.ಕುಮಾರ ನಾಯಕ

ರಾಯಚೂರು: ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಸುತ್ತಿದ್ದು, ಚುನಾವಣಾ ಆಯೋಗ ಭಯೋತ್ಪಾದನಾ ಸಂಸ್ಥೆಯಂತೆ ವರ್ತಿಸುತ್ತಿದೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ಆರೋಪಿಸಿದರು.
ರವಿವಾರ ತಮ್ಮ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2002ರಲ್ಲಿ ಮತದಾನ ಮಾಡಿದ್ದ ಅನೇಕ ಮತದಾರರ ಹೆಸರುಗಳು ಈಗಿನ ಮತದಾರರ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ. ಅಂದಿನ ಮತದಾರರ ಪಟ್ಟಿಯನ್ನು ಡಿಜಿಟಲೀಕರಣ ಮಾಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿದ್ದು, ಇದೀಗ ಜನರು ತಮ್ಮ ಹೆಸರು ಹುಡುಕಿಕೊಂಡು ಕಚೇರಿಗಳ ಅಲೆದಾಡುವಂತಾಗಿದೆ. ಹೊಸದಾಗಿ ಹೆಸರು ಸೇರ್ಪಡೆಗೆ ಅನಗತ್ಯ ದಾಖಲೆಗಳನ್ನು ಕೇಳಲಾಗುತ್ತಿದೆ. ಇದರಿಂದ ಮತದಾರರಲ್ಲಿ ಭಯ ಮತ್ತು ಗೊಂದಲ ಉಂಟಾಗಿದೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮೂಲಕ 22 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಕರ್ನಾಟಕದಲ್ಲೂ ಬಾಂಗ್ಲಾದೇಶದ ಪ್ರಜೆಗಳ ಹೆಸರಿನಲ್ಲಿ ಎಸ್‌ಐಆರ್ ನಡೆಸಲಾಗುತ್ತಿದೆ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಹಿಂದೆ ಟಿ.ಎನ್. ಶೇಷನ್, ವೆಂಕಟಾಚಲಪತಿ ಅವರಂತಹ ಚುನಾವಣಾ ಆಯುಕ್ತರು ಮಾದರಿಯಾಗಿದ್ದರು. ಈಗಿನ ಆಯೋಗದ ನಡೆ ಅದಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಬರ ಪರಿಹಾರಕ್ಕೆ ಕೇಂದ್ರಕ್ಕೆ ಒತ್ತಾಯ :
ನಾಳೆಯಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ರಾಜ್ಯದಲ್ಲಿ ಮುಂಗಾರು ವೈಫಲ್ಯದಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ರೈತರಿಗೆ ಪರಿಹಾರ ನೀಡುವ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರ ಪರಿಸ್ಥಿತಿಯ ಕುರಿತು ಕೇಂದ್ರಕ್ಕೆ ವಿವರವಾದ ಪತ್ರ ಬರೆದಿದ್ದಾರೆ. 15ನೇ ಹಣಕಾಸು ಆಯೋಗದ ಅನುದಾನದಲ್ಲಿ ತಾರತಮ್ಯ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ ಬದಲಾವಣೆ ಮಾಡಿರುವುದರಿಂದ ಗ್ರಾಮೀಣ ಜನರಿಗೆ ತೊಂದರೆಯಾಗಿದೆ. ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಜನಪರ ಮಸೂದೆಗಳಿಗೆ ಬೆಂಬಲ :
ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲು ಸೇರಿದಂತೆ ವಿವಿಧ ಮಸೂದೆಗಳು ಬರಲಿದ್ದು, ಜನಪರ ಕಾನೂನುಗಳಿಗೆ ಬೆಂಬಲ ನೀಡಲಾಗುವುದು. ಆದರೆ ಜನವಿರೋಧಿ ಮಸೂದೆಗಳನ್ನು ವಿರೋಧಿಸಲಾಗುವುದು ಎಂದು ಹೇಳಿದರು.
E-20 ಇಂಧನ ಕುರಿತು ಆಕ್ಷೇಪ :
ಇಂಧನದಲ್ಲಿ ಎಥೆನಾಲ್ ಮಿಶ್ರಣವನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನೂ ಸಂಸದರು ಟೀಕಿಸಿದರು. ಸಂಪೂರ್ಣ ಎಥೆನಾಲ್ ಮಿಶ್ರಿತ ಇಂಧನ (E-20) ಬಳಸಬೇಕೋ ಅಥವಾ ಸಾಮಾನ್ಯ ಪೆಟ್ರೋಲ್ ಬಳಸಬೇಕೋ ಎಂಬುದು ಗ್ರಾಹಕರ ಆಯ್ಕೆಯಾಗಬೇಕು. ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನವಿಲ್ಲದೆ ಏಕಪಕ್ಷೀಯವಾಗಿ ನಿಯಮ ಜಾರಿಗೊಳಿಸುವುದು ಸರಿಯಲ್ಲ ಎಂದು ಹೇಳಿದರು.
ಒಂದು ಲೀಟರ್ ಎಥೆನಾಲ್ ಉತ್ಪಾದನೆಗೆ ಸುಮಾರು 10 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅದನ್ನು ಪರಿಸರ ಸ್ನೇಹಿ ಎಂದು ಹೇಗೆ ಹೇಳಬಹುದು ಎಂದು ಪ್ರಶ್ನಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ಶಾಂತಪ್ಪ, ಜಯಣ್ಣ, ಜಿ.ಶಿವಮೂರ್ತಿ, ಶ್ರೀದೇವಿ ನಾಯಕ ಮತ್ತಿತರರು ಇದ್ದರು.






