ಸಂವಿಧಾನದ ಮೇಲೆ ಗೌರವಿದ್ದವರೆಲ್ಲರೂ ಜಾತಿವಾದ ವಿರೋಧಿಸಬೇಕು: ಬರಗೂರು ರಾಮಚಂದ್ರಪ್ಪ

ರಾಯಚೂರು : ಪ್ರಸ್ತುತ ದೇಶದಲ್ಲಿ ಸಾಮಾಜಿಕ ಶ್ರೇಣಿಕರಣ, ಆರ್ಥಿಕ ಕೇಂದ್ರೀಕರಣ ಮತ್ತು ಧಾರ್ಮಿಕ ಧೃವೀಕರಣವನ್ನು ಕಾಣುತ್ತಿದ್ದು, ಸಂವಿಧಾನದ ಮೇಲೆ ಗೌರವಿದ್ದವರೆಲ್ಲರೂ ಜಾತಿವಾದವನ್ನು ವಿರೋಧಿಸಬೇಕು ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ.ಬರಗೂರ ರಾಮಚಂದ್ರಪ್ಪ ಹೇಳಿದರು.
ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಹಾಗೂ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಸಂರಚನೆಯಲ್ಲಿ ಜಾತಿ, ವರ್ಣ, ವರ್ಗದ ಕಾರಣಕ್ಕೆ ನಡೆಯುವ ಹಿಂಸೆಯು ತಲ್ಲಣಗೊಳಿಸಿದೆ. ಶಿಕ್ಷಣ ಹಳ್ಳಿಗಳಿಗೆ ಬಂದು ಅಲ್ಲಿ ಅಕ್ಷರದ ಬಳ್ಳಿಗಳು ಹಬ್ಬಿದವು, ಮಣ್ಣಿನಲ್ಲಿ ಶಿಕ್ಷಣ ಬಂದು ಮಣ್ಣಿನ ಮನಗಳಿಗೆ ಕಣ್ಣು ತೆರೆದವು, ಹಟ್ಟಿಗಳಿಗೆ ಶಿಕ್ಷಣ ಬಂದು ಗಟ್ಟಿ ದ್ವನಿ ಬಂದಿತು. ಮಹಿಳೆಯರಲ್ಲಿ ಶಿಕ್ಷಣ ಬಂದಾಗ ಮಾತಾಗಿ ಹೊರಬಂದವು. ಗುಡಿಸಲಿಗೆ ಶಿಕ್ಷಣ ಬಂದಾಗ ಗೋಳುಗಳು ಗುಡುಗಾದವು ಎಂದು ವಿಶ್ಲೇಷಿಸಿದರು.
ದಲಿತ ಸಾಹಿತ್ಯದಲ್ಲಿ ಸಹಾನುಭೂತಿಯ ಸಂವೇದನೆ, ಸ್ವಾನುಭವದ ಸಂವೇದನೆ ಎಂಬ ಎರಡು ರೀತಿಯಾದ ದಲಿತಪರ ಕಾಳಜಿಯಿದೆ. ಸಹಾನುಭೂತಿಯ ಸಂವೇದನೆಯಲ್ಲಿ ನವೋದಯ, ಪ್ರಗತಿಶೀಲ ಹಾಗೂ ಬಂಡಾಯ ಸಾಹಿತ್ಯದಲ್ಲಿದೆ. ಇವೆಲ್ಲ ದಲಿತರ, ಅಸ್ಪೃಶ್ಯರ ಸಂಕಟಗಳ ಪರವಾಗಿರುವ ವಿಮೋಚನೆ ಬಯಸುವ ಸಂವೇದನೆಯಾಗಿದೆ. ಸ್ವಾನುಭವದ ಸಂವೇದನೆ ದಲಿತರೇ ತಮ್ಮ ಬದುಕನ್ನು ಕುರಿತು ಬರೆದಿದ್ದಾರೆ. ಇವೆರಡು ಪ್ರಮಾಣಿಕವಾದದ್ದು ಎಂದರು.
ಮೊದಲಿನಿಂದಲೂ ಸಾಮಾಜಿಕ ಶ್ರೇಣಿಕರಣವಿದ್ದು, ಜಾತಿಗಳ ಒಳಗೆ ಶ್ರೇಣಿಗಳು ರೂಪುಗೊಂಡಿವೆ. ಶೋಷಿತರಲ್ಲಿಯೂ ಶ್ರೇಣಿಗಳು ಹುಟ್ಟಿಕೊಂಡಿವೆ. ಆರ್ಥಿಕ ಕೇಂದ್ರೀಕರಣದಿಂದ ದೇಶದಲ್ಲಿ ಶೇ.60ಕ್ಕಿಂತ ಹೆಚ್ಚು ಸಂಪತ್ತನ್ನು ಶೇ.1ರಷ್ಟು ಜನರು ಅನುಭವಿಸುತ್ತಿದ್ದಾರೆ. ಧರ್ಮದ ದುರ್ವೀಕರಣದಿಂದ ಧರ್ಮಗಳ ಮಧ್ಯೆ ವೈಶ್ಯಮ್ಯವನ್ನು ಹುಟ್ಟುಹಾಕಿ ಅಧಿಕಾರ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಪ್ರತಿ 18 ನಿಮಿಷಕ್ಕೆ ಒಬ್ಬ ದಲಿತನ ಮೇಲೆ ದೌರ್ಜನ್ಯಗಳಾಗುತ್ತಿವೆ. ವಾರಕ್ಕೆ 13 ದಲಿತರ ಸಾವಾಗುತ್ತಿವೆ. 1 ದಿನಕ್ಕೆ 8 ಜನ ದಲಿತರ ಮೇಲೆ ಅತ್ಯಾಚಾರಗಳಾಗುತ್ತಿವೆ, ಇವು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇದರ ಕುರಿತು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸಂಸದ ಜಿ.ಕುಮಾರ ನಾಯಕ ಮಾತನಾಡಿ, ಇಂದಿನ ಪರಿಸ್ಥಿತಿ, ದುರ್ವಿಕರಣ, ಆರ್ಥಿಕ ಪರಿಸ್ಥತಿಯಲ್ಲಿ ಏಕಸ್ವಾಮಿತ್ವವನ್ನು ನೋಡುತ್ತಿದ್ದು, ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿ ನೋಡುತ್ತಿದ್ದೇವೆ. ಸಮೂಹ ಸಂವೇದನೆಯಿಂದ ರಚಿತವಾಗಿರುವ ಬುದ್ಧಿ ಜೀವಿಗಳು, ವಾಗ್ಮಿಗಳು, ಚಿಂತಕರು ಮತ್ತು ಬರಹಗಾರರು ಸಹಕರಿಸಿದಾಗ ಇವುಗಳನ್ನು ತೊಲಗಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಡಾ.ಎಲ್.ಹನುಮಂತಯ್ಯ, ಸಮ್ಮೇಳನದ ಸರ್ವಾಧ್ಯಕ್ಷೆ ಸಾಹಿತಿ ಡಾ.ಜಯದೇವಿ ಗಾಯಕವಾಡ, ಡಾ.ಮನು ಬಳಿಗಾರ, ಶಾಸಕ ಡಾ.ಶಿವರಾಜ ಪಾಟೀಲ್, ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೋಳಸಂಗಿ, ಮಹಾನಗರ ಪಾಲಿಕೆ ಮಾಜಿ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಮಾಜಿ ಸದಸ್ಯ ಜಯಣ್ಣ, ಆರ್‌ಡಿಎ ಸದಸ್ಯ ನರಸಿಂಹಲು ಮಾಡಗಿರಿ, ಕೆ.ಶಾಂತಪ್ಪ, ಕೃಷ್ಣ ಶಾವಂತಗೇರಾ ಸೇರಿದಂತೆ ಅನೇಕರಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಜಯದೇವಿ ಗಾಯಕವಾಡ ಮಾತನಾಡಿ, ದೇಶದಲ್ಲಿ ಸಾವಿನಲ್ಲಿ ಸಂಭ್ರಮ ಪಡುವ ವಿಕೃತ ಮನಸ್ಸುಗಳ ಅಟ್ಟಹಾಸ ಹೆಚ್ಚಾಗಿದೆ. ಜಾತಿ ವ್ಯವಸ್ಥೆ ಧರ್ಮಾಂಧತೆ ಮಿತಿ ಮೀರಿ ಬೆಳೆದು ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಆಹಾರ ಸಂಸ್ಕೃತಿಯನ್ನು ಅವಮಾನಿಸಲಾಗುತ್ತದೆ. ಮತಾಂತರ ನಿಷೇಧಕಾಯ್ದೆ, ಘರ್ ವಾಪ್ಸಿ, ಗೋಹತ್ಯೆ ನಿಷೇಧ, ಏಕ ನಾಗರಿಕ ಸಂಹಿತೆ ಕಾಯ್ದೆಗಳು, ಬಹುತ್ವ ಸಂಸ್ಕೃತಿಯನ್ನು ನಾಶಪಡಿಸುವ ಹುನ್ನಾರ ನಡೆಯುತ್ತಿದೆ.
ಇಂದು ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿ, ಅಲೆಮಾರಿ, ಬುಡಕಟ್ಟು ಹಾಗೂ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮೌಢ್ಯತೆ ಹೆಚ್ಚಾಗುತ್ತಿದೆ. ವೈಚಾರಿಕತೆ ಕಗ್ಗೊಲೆಯಾಗುತ್ತಿದೆ. ಬೆಲೆ ಏರಿಕೆ ಮಿತಿ ಮೀರುತ್ತದೆ. ಸುಲಿಗೆ, ಮಾನಭಂಗ, ಅತ್ಯಾಚಾರಗಳು, ದಿನನಿತ್ಯ ನಡೆಯುತ್ತಿವೆ. ಸತ್ಯ ಮಾತಾಡುವವರನ್ನು ಕೊಲ್ಲಲಾಗುತ್ತಿದೆ. ಗೋವಿಂದ ಪನ್ಸಾರೆ, ನರೇಂದ್ರದಾ ಬೋಲ್ಕರ್, ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶರಂತಹ ವೈಚಾರಿಕ ಮನಸ್ಸುಗಳನ್ನು ನಾಶಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಬರಗೂರ ರಾಮಚಂದ್ರಪ್ಪ,, ಸಾಹಿತಿ ಡಾ.ಎಲ್.ಹನುಮಂತಯ್ಯ, ಡಾ.ಮನು ಬಳಿಗಾರ, ಶಾಸಕ ಡಾ.ಶಿವರಾಜ ಪಾಟೀಲ್, ಸಂಸದ ಜಿ.ಕುಮಾರ ನಾಯಕ, ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೋಳಸಂಗಿ, ಮಹಾನಗರ ಪಾಲಿಕೆ ಮಾಜಿ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಮಾಜಿ ಸದಸ್ಯ ಜಯಣ್ಣ, ಆರ್‌ಡಿ ಎ ಸದಸ್ಯ ನರಸಿಂಹಲು ಮಾಡಗಿರಿ, ಕೆ.ಶಾಂತಪ್ಪ, ಕೃಷ್ಣ ಶಾವಂತಗೇರಾ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚಟ್ಹಾಳ ಸೇರಿದಂತೆ ಅನೇಕರಿದ್ದರು.


















