ವರ್ಣಾಶ್ರಮ ವ್ಯವಸ್ಥೆಯ ಪೋಷಣೆಗೆ ಕರೆ ನೀಡಿದ ಕನೇರಿಮಠದ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ : ಆರ್.ಮಾನಸಯ್ಯ

ಲಿಂಗಸುಗೂರು : ವರ್ಣಾಶ್ರಮ ವ್ಯವಸ್ಥೆಯ ಪೋಷಣೆಗೆ ಕರೆ ನೀಡಿರುವ ಕನೇರಿಮಠದ ಸ್ವಾಮಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹಿರಿಯ ಹೋರಾಟಗಾರ ಆರ್. ಮಾನಸಯ್ಯ ಆಗ್ರಹಿಸಿದರು.
ಪಟ್ಟಣದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ಜೈ ಭೀಮ್ ರೆಜಿಮೆಂಟ್ ಪಥ ಸಂಚಲನ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಲ್ಯಾಣದ ಶರಣರು ಯಾವುದೇ ಒಂದು ಧರ್ಮಕ್ಕೆ ಸೀಮಿತರಾಗದೆ ಸಹೋದರತೆಯನ್ನು ಸಾರುತ್ತ ಜಾತಿ ನಾಶಕ್ಕೆ ಕರೆ ನೀಡಿದ್ದರು. ಅವರು ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಅಂಥಹ ಮಹಾನ್ ಶರಣರನ್ನು ‘ಹಿಂದೂ’ ಎಂಬ ಒಂದೇ ಚೌಕಟ್ಟಿನಲ್ಲಿ ಬಂಧಿಸಲು ಪ್ರಯತ್ನ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವು ದಲಿತರ ಸ್ವಾಭಿಮಾನದ ಗೆಲುವಾಗಿದೆ. ಈ ಯುದ್ಧದಲ್ಲಿ ಮಹರ್ ಪಡೆಯ ಜಯವನ್ನು ಇತಿಹಾಸದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿತ್ತು. ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ವಿಜಯದ ಕುರಿತು ಚರಿತ್ರೆಯನ್ನು ದಾಖಲಿಸಿ ಇತಿಹಾಸಕ್ಕೆ ಬೆಳಕು ತಂದರು ಎಂದು ಅವರು ಹೇಳಿದರು.
“ಈ ಯುದ್ಧದ ಗೆಲುವು ದಲಿತ ಸಮುದಾಯಕ್ಕೆ ಸ್ವಾಭಿಮಾನವನ್ನು ತಂದುಕೊಟ್ಟಿದೆ. ಇನ್ನು ಮುಂದೆ ದಲಿತರು ಜಾತಿ ನಾಶದ ಹೋರಾಟವನ್ನು ಮತ್ತಷ್ಟು ಬಲಪಡಿಸಬೇಕು” ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿ.ದಾನಪ್ಪ ನಿಲೊಗಲ್, ದೊಡ್ಡಪ್ಪ ಮುರಾರಿ, ಹೆಚ್.ಎನ್. ಬಡಿಗೇರ, ಚಿದಾನಂದ ನಾಯಕ, ಮೀನಾ ಕುಮಾರಿ, ಗಂಗಾಧರ ನೀರಲಕೇರಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.







